

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ಧಾರವಾಡ ರಂಗಾಯ ನಿರ್ದೇಶಕ ಡಾ. ರಾಜು ತಾಳಿಕೋಟೆ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕಾಸಕ್ತಿ ಮುಖ್ಯ. ಜ್ಞಾನದಾಹ ಇಂಗಿಸಲು ಸತತ ಅಧ್ಯಯನ ಮಾಡಬೇಕು. ಇದು ನಿಮ್ಮನ್ನು ಉನ್ನತ ಗುರಿಯುತ್ತ ಕೊಂಡೊಯ್ಯುತ್ತದೆ. ಆಗ ಇದಕ್ಕೆ ಪ್ರೋತ್ಸಾಹಿಸಿದ ತಂದೆ-ತಾಯಿ, ಗುರುಗಳನ್ನು ಮಾತ್ರ ಮರೆಯಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳ ಅಳವಡಿಕೆ ಬಹಳ ಮುಖ್ಯ ಎಂದರು.
ಪದವಿ ಪೂರ್ವ ಪ್ರಾಚಾರ್ಯ ಡಾ.ಡಿ.ಕೆ. ವಾಗ್ಮೋಡೆ ಸ್ವಾಗತಿಸಿದರು. ಡಾ. ನೇತ್ರಾವತಿ ಗಬ್ಬೂರ ಕಾಲೇಜ್ ಒಕ್ಕೂಟದ ವಾರ್ಷಿಕ ವರದಿ, ಎಂ.ಡಿ. ಪಾಟೀಲ ಕ್ರೀಡಾ ವರದಿ ಓದಿದರು.
ವರ್ಷ ಪೂರ್ತಿ ಕ್ರಿಯಾಶೀಲರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪ್ರೇಮ ದಯಾಪೋಲೆ, ಹರ್ಷಿತಾ ಕಾಮತ್ ಅವರಿಗೆ ಆದರ್ಶ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ‘ಕಾರ್ಪೋರೇಟ್ ಆಡಳಿತ’ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಂ.ಆರ್. ಪಾಟೀಲ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯಶ್ರೀ ಹೆಗಡೆ, ಐಕ್ಯೂಎಸಿ ಸಂಯೋಜಕ ಡಾ. ಗುಣಿತ, ವಿದ್ಯಾರ್ಥಿ ಪ್ರತಿನಿಧಿಯಾದ ಪೂಜಾ ಪಾಟೀಲ, ರಾಹುಲ್ ಉಪಸ್ಥಿತರಿದ್ದರು.