

ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಶಿಕ್ಷಣದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಗುರುಗಳ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಚೆನ್ನಾಗಿ ಓದಿ ಹೆಚ್ಚಿನ ಅಂಕ ಗಳಿಸಬೇಕು. ಶಾಲೆಗೆ ಮತ್ತು ತಮ್ಮೂರಿಗೆ ಹೆಸರು ತರಬೇಕು ಎಂದು ನಗರಸಭೆ ಸದಸ್ಯ ಪ್ರಕಾಶ್ ಶಂಕನಪುರ ಹೇಳಿದರು.
ಪಟ್ಟಣದ ಸರ್ಕಾರಿ ಕೊಳ್ಳೇಗಾಲ ಟೌನ್ ಪ್ರೌಢಶಾಲೆ (ಬಾಪುನಗರ)ಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಗುರುವಾರ ಆಯೋಜಿಸಿದ್ದ ’ಕನ್ನಡ ಮಾಸಾಚರಣೆ 2024’ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲಿಗೆ ಕನ್ನಡಿಗರಾದ ನಾವು ನಮ್ಮ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಕನ್ನಡ ಓದು, ಬರಹಕ್ಕೆ ಆದ್ಯತೆ ನೀಡಬೇಕು. ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕನ್ನಡ ನಾಡಿನಲ್ಲಿ ಜನ್ಮ ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಿಸರ್ಗ ಶಾಲೆಯ ಶಿಕ್ಷಕಿ ಶಿಲ್ಪಾರಾಣಿ ಮಾತಮಾಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಇದು ಒಂದು ಸಂಪತ್ತು. ಭಾಷೆಯಲ್ಲಿ ಜನರು ಪ್ರಾವೀಣ್ಯತೆಯನ್ನು ಸಾಧಿಸಿದಾಗ, ಆ ಭಾಷೆಯಲ್ಲಿ ಸತ್ವಯುತವಾದ ಕೃತಿಗಳು ಹೊರಬಂದಾಗ, ಆ ಭಾಷೆಯ ಜನರು ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಾಣವಾದಾಗ ಮಾತ್ರ ಒಂದು ಭಾಷೆ ಸಂಪತ್ತಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ ಮಾತನಾಡಿ, ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭ್ಯವಾಗಿದೆ ಎಂದರೆ ಕನ್ನಡ ಭಾಷೆಯ ಶ್ರೀಮಂತಿಕೆಯ ಸಂಕೇತವಾಗಿದೆ. ನಮ್ಮ ಭಾಷೆ ಗದ್ಯ, ಪದ್ಯ ಚುಟುಕು, ಕಥೆ, ಕಾದಂಬರಿ, ಕಾವ್ಯ, ಮುಂತಾದ ವೈವಿಧ್ಯಮಯವಾದ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ನಗರಸಭಾ ಸದಸ್ಯ ಹಾಗೂ ಸಮಾಜ ಸೇವಕ ಪ್ರಕಾಶ್ ಶಂಕನಪುರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ, ಸಹ ಶಿಕ್ಷಕರಾದ ಶಿಲ್ಪಾರಾಣಿ, ಅನಿತಾ, ವಸಂತಾ, ನಿರ್ಮಲಾ, ಮಹದೇವನಾಯಕ, ಸೌಮ್ಯಾ, ಶಾಂತರಾಜು, ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳಿದ್ದರು.