ನೀರು ನಿರ್ವಹಣೆಯಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಿ: ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಕಿವಿಮಾತು

Study tour to Dharwada mandya
Published on

ಮಂಡ್ಯ: ವಿಶ್ವೇಶ್ವರಯ್ಯ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರು ನೀರು ನಿರ್ವಹಣೆಯಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ವಿಶ್ವೇಶ್ವರಯ್ಯ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಹೇಳಿದರು.

ಧಾರವಾಡದ ನೆಲ, ಜಲ ನಿರ್ವಹಣಾ ಸಂಸ್ಥೆಯ ಆಹ್ವಾನದ ಮೇರೆಗೆ ತಾಲೂಕಿನ ಮಂಗಲ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಸದಸ್ಯರ ಮೂರು ದಿನಗಳ ಅಧ್ಯಯನ ಪ್ರವಾಸಕ್ಕೆ ನಗರದಲ್ಲಿ ಬೀಳ್ಕೊಡುಗೆ ನೀಡಿ ಮಾತನಾಡಿದರು. ರೈತರಲ್ಲಿ ನೀರಿನ ಮಹತ್ವದ ಅರಿವಿನ ಕೊರತೆ ಇದೆ. ಕಳೆದ ವರ್ಷ ಒಂದು ಶತಮಾನಕ್ಕೂ ಹೆಚ್ಚು ಬಾರದಿರುವ ಭೀಕರ ಬರಗಾಲವನ್ನು ಅನುಭವಿಸಿದ್ದೇವೆ. ಜಲಸಂಪನ್ಮೂಲ ಇಲಾಖೆಯವರೊಟ್ಟಿಗೆ ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಸಹಕಾರ ನೀಡಿ ನೀರಿನ ಮೌಲ್ಯವನ್ನು ಅರ್ಥೈಸಿಕೊಂಡು ನೀರಿನ ಮಿತವ್ಯಯ ಮತ್ತು ಸದ್ಬಳಕೆ ಮಾಡಿಕೊಳ್ಳುವ ಹಾಗೆ ವೈಜ್ಞಾನಿಕವಾಗಿ ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಕೆ.ಆರ್.ಎಸ್. ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಲದ ನಿರ್ದೇಶಕ ಮಂಗಲ ಎಂ. ಯೋಗೀಶ್ ಮಾತನಾಡಿದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್, ಸಹಾಯಕ ಇಂಜಿನಿಯರ್ ಎ.ಎನ್. ಕೆಂಪರಾಜು, ನೀರು ಬಳಕೆದಾರರ ಸಹಕಾರ ಸಂಘದ ಸಿಇಒ ಎಂ.ಬಿ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net