ಮೈಸೂರು ಪೌರಕಾರ್ಮಿಕರಿಂದ ಸಿಂಗಾಪುರದಲ್ಲಿ ಅಧ್ಯಯನ ಪ್ರವಾಸ

Study Tour in Singapore by Mysore Civil Servants
Published on

ಸದೇಶ್ ಕಾರ್ಮಾಡ್ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಲು ನಗರದ ಪೌರ ಕಾರ್ಮಿಕರು ಸ್ವಚ್ಛತೆ ಕುರಿತು ಅಧ್ಯಯನ ನಡೆಸಲು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು.

ಸಿಂಗಾಪುರದ ಪೌರಕಾರ್ಮಿಕರು ಹಾಗೂ ಅಲ್ಲಿನ ಸ್ಥಳೀಯ ಆಡಳಿತ ನಗರವನ್ನು ಸ್ವಚ್ಛವಾಗಿಡಲು ಅನುಸರಿಸುತ್ತಿರುವ ಕ್ರಮಗಳ ಕುರಿತು ಮೈಸೂರಿನ ಪೌರ ಕಾರ್ಮಿಕರು ಅಧ್ಯಯನ ನಡೆಸಿದರು. ನ.21 ರಂದು ಸಿಂಗಾಪುರಕ್ಕೆ ಭೇಟಿ ನೀಡಿದ ನಗರದ 9 ಪೌರ ಕಾರ್ಮಿಕರು ನ.24ರವರೆಗೆ ಅಲ್ಲಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಯ ಕುರಿತು ಮಾಹಿತಿ ಪಡೆದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮೂಲಕ ಈ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿತ್ತು. ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಂದ ಪೌರ ಕಾರ್ಮಿಕರನ್ನು ಆಯ್ಕೆ ಮಾಡಲಾಗಿತ್ತು. ನಗರ ಪಾಲಿಕೆಯಿಂದ 9 ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ಕಳುಹಿಸಿಕೊ ಡಲಾಗಿತ್ತು. ಇವರ ಸಂಪೂರ್ಣ ಖರ್ಚು ವೆಚ್ಚವನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಭರಿಸಿದೆ. ಇವರಿಗೆ ನಗರ ಪಾಲಿಕೆಯ ವತಿಯಿಂದ ಪಾಸ್‌ಪೋರ್ಟ್ ಮಾಡಿಸಿಕೊಡಲಾಗಿತ್ತು.

ಸಿಂಗಾಪುರದಲ್ಲಿ ಸ್ವಚ್ಛತೆಗೆ ಪೌರ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಅಲ್ಲಿ ಯಂತ್ರೋಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಹರಡುವವರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಸ್ವಚ್ಛತೆಗೆ ಅತ್ಯಾಧುನಿಕ ಕ್ರಮಗಳು ಹಾಗೂ ದಂಡ ಪ್ರಯೋಗದಿಂದ ಸಿಂಗಾಪುರ ಸ್ವಚ್ಛತೆಯಲ್ಲಿ ಮೇಲುಗೈ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಅಧ್ಯಯನಕ್ಕೆ ಸಿಂಗಾಪುರವನ್ನು ಆಯ್ದುಕೊಳ್ಳಲಾಯಿತು.

ಇಂದೋರ್‌ಗೆ ಭೇಟಿ ನೀಡಿದ್ದ ಪಾಲಿಕೆ ಸದಸ್ಯರು

ದೇಶದ ನಂ.1 ಸ್ವಚ್ಛ ನಗರಿಯಾಗಿರುವ ಇಂದೋರ್‌ಗೆ ಇತ್ತೀಚೆಗೆ ನಗರ ಪಾಲಿಕೆ ಸದಸ್ಯರು ಭೇಟಿ ನೀಡಿ ಅಲ್ಲಿ ಸ್ವಚ್ಛತೆಗೆ ಅನುಸರಿಸುತ್ತಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಿದ್ದರು. ಇಂದೋರ್ ನಗರವನ್ನು ಸ್ವಚ್ಛವಾಗಿಡಲು ಎರಡು ಬೆಳಗ್ಗೆ ಮತ್ತು ರಾತ್ರಿ ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ಮೈಸೂರಿನಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಗರ ಪಾಲಿಕೆ ಸಿದ್ಧತೆ ಕೈಗೊಂ ಡಿದೆ. ಇಂದೋರ್ ನಗರವು ತ್ಯಾಜ್ಯದಿಂದ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದ್ದು, ನಗರದಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದಿ ಂದ ಬಯೋಗ್ಯಾಸ್ ತಯಾರಿಸಿ ಮಾರಾಟ ಮಾಡುತ್ತಿದೆ. ಇದರಿಂದ ಇಂದೋರ್ ವಾರ್ಷಿಕ 2.50 ಕೋಟಿ ರೂ.ಗಳಿಸುತ್ತಿದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ

2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯ ಸಮಗ್ರ ವಿಭಾಗದಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು. 2018 ಮತ್ತು 2020ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ, 2021ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನ ಪಡೆಯಿತು. 2021ರಲ್ಲಿ 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಪೈಕಿ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ ಪ್ರಶಸ್ತಿ ಪಡೆಯಿತು. 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 2019 ರಿಂದ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್ ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿ ಪಡೆಯುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಮರುಬಳಕೆ ಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ಮತ್ತು ಏಕೈಕ ನಗರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನದಲ್ಲಿ ಮೈಸೂರು ನಗರ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೆ ನಗರವು ಸ್ವಚ್ಛತೆಯಲ್ಲಿ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮೈಸೂರು ನಗರ ಸ್ವಚ್ಛತೆಯ ಕಾರಣಕ್ಕೆ ದೇಶದಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿದೆ. ಪೌರ ಕಾರ್ಮಿಕರ ‘ಸಿಂಗಾಪುರ ಅಧ್ಯಯನ ಪ್ರವಾಸ’ದಿಂದ ನಮ್ಮ ನಗರವನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರವಾಗಿ ಇಡಲು ಸಹಕಾರಿಯಾಗಲಿದೆ. ಸಿಂಗಾಪುರದ ಅಧ್ಯಯನ ವರದಿಯ ಆಧಾರದ ಮೇಲೆ ನಗರದಲ್ಲೂ ಸ್ವಚ್ಛತಾ ಕಾರ್ಯದಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುವುದು. ಪೌರ ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸಲು ಹಾಗೂ ಅವರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ವಹಿಸುತ್ತಿದ್ದೇವೆ.
ಅಸಾದ್ ಉರ್ ರೆಹಮಾನ್ ಷರೀಫ್,
ನಗರ ಪಾಲಿಕೆ ಆಯುಕ್ತ

ನಗರದ 9 ಪೌರ ಕಾರ್ಮಿಕರು ಸಿಂಗಾಪುರಕ್ಕೆ ಸ್ವಚ್ಛತೆಯ ಕುರಿತು ಅಧ್ಯಯನ ಮಾಡಲು ತೆರಳಿದ್ದಾರೆ. ಈ ಅಧ್ಯಯನ ಪ್ರವಾಸದಿಂದ ನಮ್ಮ ನಗರಕ್ಕೆ ಸಾಕಷ್ಟು ಅನುಕೂಲವಾಗುವ ನಿರೀಕ್ಷೆಯನ್ನು ಹೊಂದಿದ್ದೇವೆ. ಸಿಂಗಾಪುರದಲ್ಲಿ ಸ್ವಚ್ಛತೆಗೆ ಅನುಸರಿಸುತ್ತಿರುವ ಅತ್ಯುತ್ತಮ ಕ್ರಮಗಳನ್ನು ಇಲ್ಲೂ ಅಳವಡಿಸಿಕೊಳ್ಳುವ ಮೂಲಕ ನಗರವನ್ನು ಮತ್ತಷ್ಟು ಶುಚಿಯಾಗಿಡಲು ಶ್ರಮಿಸಲಾಗುವುದು. ನಗರವನ್ನು ಶುಚಿಯಾಗಿಡಲು ಪೌರ ಕಾರ್ಮಿಕರ ಪಾತ್ರ ಅಪಾರವಾಗಿದ್ದು, ಅವರಿಗೋಸ್ಕರ ಸರ್ಕಾರ ಅಧ್ಯಯನ ಪ್ರವಾಸ ಹಮ್ಮಿಕೊಂಡಿರುವುದು ಸಂತಸ ಉಂಟು ಮಾಡಿದೆ.
ಡಾ.ವೆಂಕಟೇಶ್,
ನಗರಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net