

ಮೈಸೂರು: ಅರಳುವ ಕವಿಗಳು ಮೊದಲು ಕನ್ನಡ ಸಾಹಿತ್ಯ ಲೋಕದ ಪೂರ್ವಜರ ಸಾಹಿತ್ಯ, ಕೃತಿಗಳನ್ನು ವಿಸ್ತೃತವಾಗಿ ಅಭ್ಯಸಿಸಬೇಕು. ಜತೆಗೆ ಹಿರಿಯ ಸಾಹಿತಿಗಳ ಒಡನಾಟ ಹೊಂದಬೇಕು. ಆಗ ಹೊಸ ಅನುಭವಗಳು ದೊರೆಯುತ್ತವೆ ಎಂದು ಲೇಖಕಿ ಮೀನಾ ಮೈಸೂರು ಅವರು ಯುವ ಲೇಖಕರಿಗೆ ಸಲಹೆ ನೀಡಿದರು.
ಕ್ರಿಯಾ ಮೈಸೂರು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಬೋಗಾದಿಯಲ್ಲಿರುವ ಕ್ರಿಯಾ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಾಗಿಯ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರ ಸಾಹಿತ್ಯ ಓದಿನಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯ. ಕವಿಗೆ ಜೀವನಾನುಭವ ಮತ್ತು ಮಾಗುವಿಕೆಯ ಅಗತ್ಯವಿದೆ. ಇದು ದಕ್ಕುವುದು ಓದಿನಿಂದ ಮಾತ್ರ. ನವ ಕವಿಗಳು ಹಿರಿಯ ಕವಿಗಳ ಕೃತಿಗಳ ಓದಿನಿಂದ ಪಡೆದ ತಿಳಿವಳಿಕೆಯಿಂದ ತಮ್ಮ ಕವಿತೆಗಳನ್ನು ಮತ್ತೆ ಮತ್ತೆ ಓದುವ, ತಿದ್ದುವ, ಪರಿಷ್ಕರಿಸಲು ಸಾಧ್ಯವಾಗುತ್ತದೆ ಎಂದರು.
ಒಂದು ಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಕರು, ಸಾಹಿತ್ಯವನ್ನು ಆಳವಾಗಿ ಓದಿಕೊಂಡವರು ಮಾತ್ರ ಸಾಹಿತ್ಯ ಕೃಷಿ ಮಾಡುತ್ತಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಬೇರೆ, ಬೇರೆ ಹಿನ್ನೆಲೆಯಿಂದ ಬಂದಿರುವವರೂ ಕವಿತೆ, ಲೇಖನ ಬರೆಯುತ್ತಿದ್ದಾರೆ. ಇದರಿಂದ ಬರೆಯುವವರ ಸಂಖ್ಯೆ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕವಿತೆಯ ಹುಟ್ಟುವುದು ಏಕಾಂತದಲ್ಲಿ ಮತ್ತು ಧ್ಯಾನಸ್ಥ ಮನಸ್ಥಿತಿಯಲ್ಲೇ ಹೊರತು, ಬಯಲಿನಲ್ಲಿ, ಗದ್ದಲದಲ್ಲಿ ಅಲ್ಲ ಎಂಬುದನ್ನು ಯುವ ಕವಿಗಳು ಅರಿಯಬೇಕು. ಶಬ್ದ ಬಳಕೆಯಲ್ಲಿ ಎಚ್ಚರಿಕೆ ಜೊತೆಗೆ ಜಿಪುಣತನ ಇರಬೇಕು. ಭಾಷೆಯ ಮೇಲೆ ಹಿಡಿತ ಸಾಧಿಸಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕೆ. ತಿಮ್ಮಯ್ಯ ಮಾತನಾಡಿ, ಜಗತ್ತಿನಲ್ಲಿ ಕವಿಯ ಕಾವ್ಯಕ್ಕೆ ವಸ್ತುವಾಗಬಲ್ಲ ಸಮಸ್ಯೆಗಳು, ಸವಾಲುಗಳು, ವಿಚಾರಗಳು ಸಾಕಷ್ಟಿವೆ. ಇವುಗಳನ್ನು ಕಾವ್ಯದಲ್ಲಿ ಹೊಸ ವಿನ್ಯಾಸದಲ್ಲಿ ಕಟ್ಟಿಕೊಡಬೇಕು ಎಂದರು.
ಹಿಂದಿನವರು ಬರೆದ ಹಾಗೆಯೇ ಅವರನ್ನು ಅನುಕರಣೆ ಮಾಡಿ ಹೊಸ ತಲೆಮಾರಿನ ಕವಿಗಳು ಬರೆಯಬಾರದು. ತಮ್ಮದೇ ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳಬೇಕು. ಜನರಿಗೆ ತಲುಪುವಂತೆ ಬರೆಯಬೇಕು. ಈ ದಿಕ್ಕಿನಲ್ಲಿ ಬಸವಣ್ಣನವರ ವಚನಗಳ ರಚನಾ ಮಾದರಿ ಅನುಸರಿಸಿ ಶಬ್ದಾರ್ಥಗಳ ಕಡೆಗೆ ಲಕ್ಷ್ಯವಿರಿಸಿ ಬರೆಯುವತ್ತ ಗಮನವಹಿಸಬೇಕು ಎಂದು ಹೇಳಿದರು.
ಇಂದಿನ ಬಹುತೇಕ ಸಾಹಿತಿಗಳು ಖ್ಯಾತಿ, ಪ್ರಶಸ್ತಿ, ಹಣಕ್ಕಾಗಿ ಬರೆಯುವುದನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಿಂದ ಸಾಹಿತ್ಯ ಕೃತಿಗಳು, ಗೋಷ್ಠಿಗಳು ಸಮಾಜವನ್ನು ತಲುಪುತ್ತಿಲ್ಲ. ಕವಿಗಳು ಹೆಚ್ಚಾಗುತ್ತಿದ್ದಾರೆ. ಆದರೆ ಸಹೃದಯರ ಕೊರತೆಯಿದೆ. ಒಟ್ಟಾರೆ ಜನರು ಸಾಹಿತ್ಯದಿಂದ ದೂರ ಸರಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಕ್ರಿಯಾ ಮೈಸೂರು ಸಂಸ್ಥೆಯ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು ಕವಿಗಳ ಕುರಿತು ಮಾತನಾಡಿದರು. ಎರಡೂ ಸಂಸ್ಥೆಯ ಪದಾಧಿಕಾರಿಗಳಾದ ಮಂದಾರ ಎಸ್. ಉಡುಪಿ, ಶಾಲಿನಿ, ಚಂದ್ರು ಮಂಡ್ಯ, ಬಸಪ್ಪ ಸಿ. ಸಾಲುಂಡಿ ಇತರರು ಇದ್ದರು. ಕವಿಗೋಷ್ಠಿಯಲ್ಲಿ 30 ಕ್ಕೂ ಅಧಿಕ ಜನರು ಕವನ ವಾಚಿಸಿದರು.