

| ವೇಣುವಿನೋದ್ ಕೆ.ಎಸ್. ಮಂಗಳೂರು
ಅಡಕೆಯಲ್ಲಿ ಕ್ಯಾನ್ಸರ್ ಕಣಗಳನ್ನು ತಟಸ್ಥಗೊಳಿಸುವ ಗುಣಗಳಿವೆಯೇ ಹೊರತು ಅಡಕೆ ಎಂದಿಗೂ ಕ್ಯಾನ್ಸರ್ ಕಾರಕವಲ್ಲ! ಹೀಗೊಂದು ವೈಜ್ಞಾನಿಕ ಆಧಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಹೆಜ್ಜೆ ಇರಿಸಿದೆ. ಮುಂದೆ ಅಡಕೆಗೆ ಬರಬಹುದಾದ ‘ಅಪಾಯಕಾರಿ’ ಎಂಬ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಎದುರಿಸುವುದಕ್ಕೆ ಬೇಕಾದ ಸಿದ್ಧತೆ ಇದಾಗಿದೆ. ಈ ಪ್ರಯತ್ನವಾಗಿ ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸಂಶೋಧನೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಝೀಬ್ರಾ ಮೀನುಗಳ ಮೇಲೆ ಪ್ರಯೋಗ ನಡೆಯಲಿದೆ. ನಿಟ್ಟೆ ವಿವಿಯ ತಜ್ಞರಾದ ಡಾ. ಇಡ್ಯಾ ಕರುಣಾ ಸಾಗರ್ ಲ್ಯಾಬೊರೇಟರಿ ಇವಾಲ್ಯುವೇಶನ್ ನಡೆಸಲಿದ್ದಾರೆ. ಇದಕ್ಕಾಗಿ ಕ್ಯಾಂಪ್ಕೊ 25 ಲಕ್ಷ ರೂ. ವೆಚ್ಚ ಮಾಡುತ್ತಿದೆ.
ಕ್ಯಾನ್ಸರ್ ಗುಣಪಡಿಸುವ ಲೇಹ್ಯ: ಅಡಕೆಗೆ ಕ್ಯಾನ್ಸರ್ ಗುಣಪಡಿಸುವ ಗುಣವಿದೆ ಎನ್ನುವುದಕ್ಕೆ ಸಂಶೋಧನೆ ಜತೆಯಲ್ಲೇ ಆ ಕುರಿತ ಔಷಧವೊಂದನ್ನೂ ಜೆಡ್ಡು ಆಯುರ್ವೆದ ಅಧ್ಯಯನ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕೆ ಕ್ಯಾಂಪ್ಕೊ ಪ್ರವರ್ತಿತ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್ಡಿಎಫ್) ನೆರವು ನೀಡುತ್ತಿದೆ. ಇದರಲ್ಲಿ ಶೇ.20 ಅಡಕೆ ಹಾಗೂ ಶೇ.20 ವೀಳ್ಯದೆಲೆಯ ಅಂಶಗಳಿದ್ದರೆ ಉಳಿದಂತೆ ಜೇನು, ಲವಂಗ, ಅರಿಶಿಣ ಇತ್ಯಾದಿಗಳಿರುತ್ತವೆ. ಸದ್ಯ ಲೇಹವನ್ನು ತಯಾರಿಸಿ ಪ್ರಥಮ ಹಂತದಲ್ಲಿ ಯಶಸ್ಸು ಕಂಡಿರುವ ವಿಜ್ಞಾನಿಗಳು, ಮುಂದಿನ ಹಂತದಲ್ಲಿ ಇಲಿಗಳಿಗೆ ಕ್ಯಾನ್ಸರ್ ಬರುವಂತೆ ಮಾಡಿ, ಅವುಗಳಿಗೆ ಈ ಲೇಹ್ಯದ ಅಂಶ ನೀಡಿ ಗುಣಪಡಿಸುವ ಕಾರ್ಯ ನಡೆಸಲಿದ್ದಾರೆ ಎನ್ನುತ್ತಾರೆ ಎಆರ್ಡಿಎಫ್ನ ಅಧ್ಯಕ್ಷ ಡಾ.ಕೇಶವ ಭಟ್.
ಅಡಕೆ ದೇಹದ ಆರೋಗ್ಯಕ್ಕೆ ಹಾನಿಕಾರಕವಲ್ಲ, ಪೂರಕ, ಕ್ಯಾನ್ಸರ್ ಗುಣಪಡಿಸಬಲ್ಲದು ಎಂಬುದಕ್ಕೆ ಭಾರತೀಯ ಸಂಶೋಧನೆ ಅಗತ್ಯವಿದ್ದು, ಅದಕ್ಕಾಗಿ ನಿಟ್ಟೆ ವಿಶ್ವವಿದ್ಯಾಲಯ ಸಂಶೋಧನೆ ನಡೆಸಲಿದೆ. ಇದರಿಂದ ನಮ್ಮ ವಾದಕ್ಕೆ ವೈಜ್ಞಾನಿಕ ಆಧಾರ ಸಿಗಲಿದೆ. | ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷ, ಕ್ಯಾಂಪ್ಕೊ
ಟೂತ್ಪೇಸ್ಟ್ ತಯಾರಿ
ಕ್ಯಾಂಪ್ಕೊ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ಟೂತ್ಪೇಸ್ಟ್ ಕೂಡ ಅಭಿವೃದ್ಧಿ ಪಡಿಸಿದ್ದಾರೆ. ಆದರೆ ಇದಕ್ಕೆ ನೇರವಾಗಿ ಅಡಕೆ ಬಳಸಿಕೊಂಡರೆ ದರ ಹೆಚ್ಚಾಗಿ ಮಾರುಕಟ್ಟೆಯಲ್ಲಿ ನಿಲ್ಲುವುದು ಕಷ್ಟ. ಹಾಗಾಗಿ ಉತ್ತರ ಕನ್ನಡ, ಮಲೆನಾಡಿನಲ್ಲಿ ಎಸೆಯಲಾಗುವ ಹಸಿ ಅಡಕೆ ಅಂಶವನ್ನು ಬಳಸಿಕೊಳ್ಳಲಾಗುವುದು. ಈಗಾಗಲೇ ಟೂತ್ಪೇಸ್ಟ್ ಮಾದರಿ ಸಿದ್ಧಗೊಂಡಿದ್ದು, ಅದಕ್ಕೆ ಬ್ಯಾಕ್ಟೀರಿಯಾ ನಿರೋಧಕ ಗುಣವಿರುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
ಮೀನಿನ ಮೇಲೆ ಪ್ರಯೋಗ
ವಿಜ್ಞಾನಿಗಳು ಉತ್ತರ ಕನ್ನಡದ ಕೆಂಪಡಕೆ, ದಕ್ಷಿಣ ಕನ್ನಡ ಭಾಗದ ಬಿಳಿ ಚಾಲಿ, ಹಣ್ಣಡಕೆಗಳಿಂದ ಪ್ರತ್ಯೇಕಿಸಲಾದ ದ್ರವಾಂಶವನ್ನು ಝೀಬ್ರಾ ಮೀನುಗಳಿಗೆ ಹಾಗೂ ಹಣ್ಣಿನ ನೊಣಗಳಿಗೆ ನೀಡಿ, ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಅರಿತುಕೊಳ್ಳಲಿದ್ದಾರೆ. ಈಗಾಗಲೇ ‘ಮಾಲೆಕ್ಯುಲರ್ ಸೆಲ್’ ಎನ್ನುವ ಖ್ಯಾತ ವೈಜ್ಞಾನಿಕ ನಿಯತಕಾಲಿಕದಲ್ಲಿ, ಅಡಕೆ ಕ್ಯಾನ್ಸರನ್ನು ಗುಣಪಡಿಸುವ ಅಂಶಗಳನ್ನು ಹೊಂದಿರುವುದಾಗಿ ಸಂಶೋಧನಾ ಪ್ರಬಂಧ ಪ್ರಕಟಗೊಂಡಿದೆ. ಆದರೆ ನಮ್ಮಲ್ಲಿಯೂ ಅದೇ ರೀತಿಯ ಸಂಶೋಧನೆ ಇರಬೇಕಾಗಿರುವುದರಿಂದ ನಿಟ್ಟೆ ವಿವಿಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎನ್ನುತ್ತಾರೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ.
ಜೀಬ್ರಾ ಮೀನುಗಳ ದೇಹದ ಗುಣ ಮನುಷ್ಯ ದೇಹದ ಗುಣಗಳಿಗೆ ಹೋಲುವುದರಿಂದ ಅದನ್ನು ಕ್ಯಾನ್ಸರ್ ಸಂಶೋಧನೆಯಲ್ಲಿ ಬಳಸಲಾಗುತ್ತದೆ. ಕ್ಯಾಂಪ್ಕೊದವರು ಅಡಕೆಯ ಕ್ಯಾನ್ಸರ್ ಗುಣಪಡಿಸುವ ಗುಣದ ಬಗ್ಗೆ ಸಂಶೋಧನೆ ನಡೆಸಲು ನಿಟ್ಟೆ ವಿವಿ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ಗೆ ಕೇಳಿಕೊಂಡಿದ್ದಾರೆ. ಅವರು ಅನುಮೋದಿಸಿದ ಬಳಿಕ ಸಂಶೋಧನೆ ನಡೆಸಲಾಗುವುದು. | ಡಾ.ಇಡ್ಯಾ ಕರುಣಾಸಾಗರ್ ತಜ್ಞರು, ನಿಟ್ಟೆ ವಿವಿ