

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಡಿ.ಎಂ. ನಂಜು0ಡಪ್ಪ ವರದಿ ಅನುಷ್ಠಾನದಲ್ಲಿ ಆಗಿರುವ ಅಭಿವೃದ್ಧಿ, ಬದಲಾವಣೆ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ, ಅದಕ್ಕೆ ಪೂರಕವಾಗಿ ಅಸಮತೋಲನ, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಅಗತ್ಯ ಅಂಶಗಳನ್ನು ಶಿಫಾರಸು ಮಾಡಲು ಸಮಿತಿ ಎಲ್ಲ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಮಾಡುತ್ತಿದೆ. ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಗೋವಿಂದರಾವ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ಮಾಡಲಾಗಿದೆ. 4 ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಹಿಂದುಳಿದ ಪ್ರದೇಶಗಳು ಹೆಚ್ಚಿವೆ. ಕಿತ್ತೂರು ಕರ್ನಾಟಕ ಅಂತ್ಯ0ತ ಹಿಂದುಳಿದ ತಾಲೂಕುಗಳು ಇಲ್ಲದಿದ್ದರೂ ಹಿಂದುಳಿದ ಪ್ರದೇಶಗಳಿವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಅಧ್ಯಯನ ಮಾಡಿ, ನಾವು ವರದಿ ಸಲ್ಲಿಸಲಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಬಡ ಜನರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಮಹತ್ವ ನೀಡಿದರೆ ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಪಠ್ಯಪುಸ್ತಕ ಆಗಾಗ ನವೀಕರಣ ಆಗದಿದ್ದರೆ ಶೈಕ್ಷಣಿಕ ಸುಧಾರಣೆ ಅಸಾಧ್ಯ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳೊಂದಿಗೆ ನೀರಾವರಿಗೂ ಆದ್ಯತೆ ಸಿಗಬೇಕು. ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ ಮತ್ತು ವಿವಿಧ ಸಣ್ಣ ಹಳ್ಳಗಳ ನೀರಿನ ಸದುಪಯೋಗವಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅವಳಿನಗರ ಭೌಗೋಳಿಕ ಮತ್ತು ಎಲ್ಲ ದೃಷ್ಟಿಯಿಂದಲೂ ಅನುಕೂಲಕರ ಸ್ಥಾನದಲ್ಲಿದೆ. ಕೈಗಾರಿಕಾ ಬೆಳವಣಿಗೆ, ಹೊಸ ಮತ್ತು ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಗಬೇಕು ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ ಸಲಹೆ ನೀಡಿದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ವಿಶಾಲ ಆರ್. ಸಭೆ ನಿರ್ವಹಿಸಿದರು. ಸಮಿತಿ ಸದಸ್ಯರಾದ ಡಾ. ಸೂರ್ಯನಾರಾಯಣ ಎಂ.ಎಚ್., ಡಾ. ಎಸ್.ಟಿ. ಬಾಗಲಕೋಟ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಡಾ ಅಧ್ಯಕ್ಷ ಶಾಕೀರ ಸನದಿ ವೇದಿಕೆಯಲ್ಲಿದ್ದರು.
ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಽಗಳು, ಕರ್ನಾಟಕ ಛೇಂಬರ್ ಆಫ್ ಕಾಮರ್ಸ್, ಉದ್ಯಮಿಗಳು, ವಕೀಲರು, ಶಿಕ್ಷಣ ತಜ್ಞ ಡಾ. ಎಸ್.ಎಂ. ಶಿವಪ್ರಸಾದ, ಮಹಿಳಾ ಹೋರಾಟಗಾರರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ವಿಷಯಗಳನ್ನು ಮಂಡಿಸಿದರು.