ಭಾರತದ ಕೃಷಿ ಪದ್ಧತಿಗೆ ಅಮೆರಿಕಾ ವಿದ್ಯಾರ್ಥಿಗಳ ಮೆಚ್ಚುಗೆ: ಮಂಡ್ಯ ಜಿಲ್ಲೆಯ ಪ್ರಸಿದ್ಧ ಗ್ರಾಮದಲ್ಲಿ ದಿನವಿಡೀ ಕಾಲಕಳೆದ ವಿದೇಶಿಗರು

Study of Indian agriculture by American students mandya
Published on

ಮಂಡ್ಯ: ಭಾರತದ ಕೃಷಿ ಕ್ಷೇತ್ರದ ಅಧ್ಯಯನಕ್ಕೆಂದು ಅಮೆರಿಕಾದ ವಿದ್ಯಾರ್ಥಿಗಳು ಮದ್ದೂರು ತಾಲೂಕು ಕೊಕ್ಕರೆಬೆಳ್ಳೂರು ಗ್ರಾಮಕ್ಕೆ ಆಗಮಿಸಿ ದಿನವಿಡೀ ಕಾಲಕಳೆದರು.

ಮೂವರು ಕರ್ನಾಟಕದ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ 25ಕ್ಕೂ ಹೆಚ್ಚು ಜನರು ಭಾರತದ ಕೃಷಿ ಚಟುವಟಿಕೆಯನ್ನು ಹತ್ತಿರದಿಂದ ಗಮನಿಸಿದರು. ಹೆರ್ಜ್ಜಾಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಸೇರಿದಂತೆ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಪರಿಚಯ ಮಾಡಿಕೊಟ್ಟರು. ಪ್ರಮುಖವಾಗಿ ಆಲೆಮನೆ ಹಾಗೂ ಬೆಲ್ಲದ ಉತ್ಪಾದನೆ ಬಗ್ಗೆ ಸಮಗ್ರ ಅಧ್ಯಯನಕ್ಕೆಂದು ವಿದ್ಯಾರ್ಥಿಗಳು ಆಗಮಿಸಿದ್ದರು. ಅದರಂತೆ ಕಬ್ಬು ಬೆಳೆ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಲಾಯಿತು. ಬಿತ್ತನೆಯಿಂದ ಹಿಡಿದು ಕಟಾವುವರೆಗಿನ ವಿವರನ್ನು ತಿಳಿಸಿಕೊಡಲಾಯಿತು.

ಮಾತ್ರವಲ್ಲದೆ ರೇಷ್ಮೆ ಹುಳು ಸಾಕಾಣಿಕೆ ಸೇರಿದಂತೆ ಇತರೆ ಕೃಷಿ ಹಾಗೂ ಪೂರಕ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿಯಿಂದ ತಿಳಿದುಕೊಂಡರು. ಅಂತೆಯೇ ಅಂಗನವಾಡಿಗೆ ತೆರಳಿ ಶಿಕ್ಷಣ ಪದ್ಧತಿಯನ್ನು ಗಮನಿಸಿದರು. ಇನ್ನು ಗ್ರಾಮಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆಂದು ಚಪ್ಪಾತಿ, ಮೊಸರನ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರೊಂದಿಗೆ ಊಟ ಸವಿದು ಫೋಟೋ ಕ್ಲಿಕ್ಕಿಸಿಕೊಂಡು ಸಂಜೆವರೆಗೂ ಕಾಲಕಳೆದ ಬಸ್‌ನಲ್ಲಿ ವಾಪಾಸಾದರು.

ಮನುಷ್ಯ-ಪಕ್ಷಿ ಸಂಬಂಧಕ್ಕೆ ಮೆಚ್ಚುಗೆ

ವಿದೇಶಿ ಕೊಕ್ಕರೆ ಹಾಗೂ ಗ್ರಾಮಸ್ಥರ ನಡುವಿನ ಸಂಬಂಧದ ಬಗ್ಗೆ ವಿದ್ಯಾರ್ಥಿಗಳು ಕುತೂಹಲದಿಂದ ತಿಳಿದುಕೊಂಡರು. ವಿದೇಶದಿಂದ ಆಗಮಿಸಿ ಹಲವು ತಿಂಗಳು ಗ್ರಾಮದಲ್ಲಿಯೇ ವಾಸ್ತವ್ಯವಿದ್ದು, ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಬಗ್ಗೆ ಮಾಹಿತಿ ಪಡೆದರು. ಮಾತ್ರವಲ್ಲದೆ ಕೊಕ್ಕರೆಗಳು ವಾಸಿಸುವ ಸ್ಥಳ, ಸಂತಾನೋತ್ಪತ್ತಿ ಸೇರಿದಂತೆ ಹಲವು ವಿಷಯವನ್ನು ತಿಳಿದುಕೊಂಡರು. ಅಂತೆಯೇ ಕೊಕ್ಕರೆ ಹಾಗೂ ಗ್ರಾಮಸ್ಥರ ನಡುವಿನ ಸಂಬಂಧ ಕುರಿತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net