ಭಗ್ನ ವೀರಗಲ್ಲು ಶಾಸನ, ದಾನ ಶಾಸನ ಅಧ್ಯಯನ

KDR scrp
ಕಡೂರು ತಾಲೂಕಿನ ಕಾಮನಕೆರೆ ಗ್ರಾಮದಲ್ಲಿ ಹೊಯ್ಸಳರ ಕಾಲದ ಭಗ್ನ ವೀರಗಲ್ಲು.
Published on

ಕಡೂರು: ಕಾಮನಕೆರೆ ಗ್ರಾಮದಲ್ಲಿ ಹೊಯ್ಸಳರ ಕಾಲದ ಭಗ್ನ ವೀರಗಲ್ಲು ಶಾಸನ ಮತ್ತು ವಿಜಯನಗರ ಕಾಲದ ದಾನಶಾಸನವನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅಧ್ಯಯನ ಮಾಡಿದ್ದಾರೆ.

ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯದ ಎದುರಿನ ಭೂತಪ್ಪ ಸ್ವಾಮಿ ಗುಡಿಯ ಬಲಪಾರ್ಶ್ವದಲ್ಲಿ ತುಂಡು ಗ್ರಾನೈಟ್ ಕಲ್ಲಿನ ಮೇಲೆ ವಿಜಯನಗರ ಅರಸರ ಕಾಲದ ಕನ್ನಡ ಲಿಪಿ ಸಾದೃಶ್ಯ ಹೊಂದಿರುವ ಹನ್ನೆರಡು ಸಾಲು ಶಾಸನ ಬರೆಯಲ್ಪಟ್ಟಿದೆ. ಶಕವಷರ್ದ ಉಲ್ಲೇಖವಿಲ್ಲದೆ, ಕ್ರೋಧಿ ಸಂವತ್ಸರದ ಪುಷ್ಯ ಮಾಸದ ಬಹುಳ ದಿನದಂದು ವ್ಯಕ್ತಿಯೊಬ್ಬನಿಗೆ ಹೊಲವನ್ನು ದಾನ ಮಾಡಿರುವ ಕುರಿತು ಉಲ್ಲೇಖಿಸಲಾಗಿದೆ. ಶಾಸನವು ವಿಜಯನಗರ ಸಾಮ್ರಾಜ್ಯದ ಆಡಳಿತ ವಿಭಾಗವಾಗಿದ್ದ ಯಗಟಿ ಹತ್ತು ಸಾವಿರ ಸೀಮೆ ಪ್ರಾಂತ್ಯದ ಆಡಳಿತ ನಡೆಸುತ್ತಿದ್ದ ಅಮರನಾಯಕರ ಕಾಲದ ಹದಿನಾರನೇ ಶತಮಾನದ ಶಾಸನವೆಂದು ಶಾಸನದ ಲಿಪಿ ಹಾಗೂ ಭಾಷೆ ಆಧಾರದಲ್ಲಿ ಊಹಿಸಬಹುದಾಗಿದೆ. ಶಾಸನದ ಹೆಚ್ಚಿನ ಮಾಹಿತಿ ಕುರಿತಂತೆ ಅಧ್ಯಯನ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕಾಮನಕೆರೆ ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿ ಹೊಯ್ಸಳರ ಭಗ್ನ ವೀರಗಲ್ಲು ಶಾಸನ ಬಳಪದ ಕಲ್ಲಿನಲ್ಲಿ ಕೆತ್ತಲಾಗಿದ್ದು, ಎರಡು ಫಲಕಗಳನ್ನು ಹೊಂದಿದೆ. ಕೆಳಭಾಗದಲ್ಲಿ ಆಯುಧ ಹೊಂದಿರುವ ರಾಜಪ್ರಮುಖ ಅಥವಾ ಸೇನಾಧಿಪತಿಯೊಬ್ಬ ಯೋಧರು, ರಾಜಛತ್ರಿ ಹಿಡಿದ ಭಟರು ಹಾಗೂ ಯುದ್ಧಭೇರಿ ಬಾರಿಸುತ್ತಿರುವ ಭಟರ ಪಡೆಯ ಸಮೇತನಾಗಿ ಯುದ್ಧಕ್ಕೆ ಹೋಗುತ್ತಿರುವ ಸುಂದರ ಚಿತ್ರಣ ಮತ್ತು ಅಗ್ರಭಾಗದ ಫಲಕದ ಎಡಗಡೆ ಯುದ್ಧದಲ್ಲಿ ಮಡಿದ ರಾಜಪ್ರಮುಖ ಅಥವಾ ಸೇನಾಧಿಪತಿ ಪದ್ಮಪೀಠದ ಮೇಲೆ ಅಂಜಲೀಬದ್ಧನಾಗಿ ಪದ್ಮಾಸನದಲ್ಲಿ ಕುಳಿತಿರುವ ಮತ್ತು ಅವನ ಬಲಗಡೆ ಮೂವರ ಭಗ್ನ ಚಿತ್ರಣವಿದೆ. ಈ ಎರಡೂ ಫಲಕಗಳ ಮಧ್ಯೆ ಮೂರು ಸಾಲಿನ ಹೊಯ್ಸಳ ಲಿಪಿ ಸಾದೃಶ್ಯದ ಶಾಸನವಿದ್ದು, ಹೊಯ್ಸಳರ ಕಾಲದ ಯುದ್ಧದಲ್ಲಿ ಮಡಿದ ವೀರನ ಮರಣದ ಉಲ್ಲೇಖದ ಶಾಸನ ಇದಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆದಿದೆ. ವೀರಗಲ್ಲು ಪಕ್ಕದಲ್ಲಿ ವೀರಮಹಾಸತಿ ಸ್ಮಾರಕದ ಭಗ್ನ ವೀರನೊಬ್ಬನ ಶಿಲ್ಪವೂ ದೊರೆತಿದೆ. ಅಧ್ಯಯನಕ್ಕೆ ನರಸಿಂಹ ಸ್ವಾಮಿ ದೇವಾಲಯದ ಅರ್ಚಕ ಕಾಳಾಚಾರ್, ಜಿ.ಚಂದ್ರಶೇಖರ, ಕೆ.ವಿ.ಚರಣ್, ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಸಹಕರಿಸಿದ್ದರು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net