ಕನ್ನಡಿಗರಿಗೆ ಉದ್ಯೋಗ ಆಂಧ್ರ ಕಾಯ್ದೆ ಅಧ್ಯಯನ

Madhuswamy
Published on

ರಾಜ್ಯದಲ್ಲಿನ ಖಾಸಗಿ ಸಂಸ್ಥೆ ಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಆಂಧ್ರಪ್ರದೇಶ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ಚಿಂತಿಸಲಾಗಿದೆ. ಜತೆಗೆ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಪರಿಷತ್​ನಲ್ಲಿ ನಿಯಮ 330ರ ಅಡಿ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಯನ್ವಯ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಿದ್ಧಪಡಿಸಿರುವ ಮಸೂದೆಯನ್ನು ಸದನದಲ್ಲಿ ಮಂಡಿ ಸುವ ಕುರಿತು ಜೆಡಿಎಸ್​ನ ಬಸವರಾಜ ಹೊರಟ್ಟಿ ಪ್ರಸ್ತಾವನೆಗೆ ಅವರು ಉತ್ತರಿಸಿದರು. ಈ ಹಿಂದಿನ ಬಜೆಟ್​ನಲ್ಲಿ ಸರ್ಕಾರದಿಂದ ಸೌಲಭ್ಯ ಪಡೆಯುವ ಖಾಸಗಿ ಸಂಸ್ಥೆಗಳಲ್ಲಿನ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಶೇ.100 ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕೆಂದು ಪ್ರಸ್ತಾಪಿಸಲಾಗಿದೆ. ಆದರದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಎ ಮತ್ತು ಬಿ ವೃಂದದಲ್ಲೂ ಆದ್ಯತೆ ಮೇರೆಗೆ ಕನ್ನಡಿಗರಿಗ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂಬ ನಿಯಮ ಜಾರಿಗೊಳಿಸಲು ರ್ಚಚಿಸಲಾಗುತ್ತಿದೆ. ಸಚಿವ ಸಂಪುಟದಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಶೀಘ್ರದಲ್ಲಿ ಅಂತಿಮ ಆದೇಶ ಹೊರಡಿಸಲಾಗುವುದು ಎಂದರು.

ಜಿಲ್ಲಾ ಮಟ್ಟದ ಸಮಿತಿ: ಆಂಧ್ರಪ್ರದೇಶದಲ್ಲಿ ಪ್ರತಿ ಸಂಸ್ಥೆಯಲ್ಲೂ ತೆಲಗು ಭಾಷಿಕರಿಗೆ ಉದ್ಯೋಗ ಮೀಸಲಾತಿ ಇದೆ. ಅಲ್ಲಿನ ನಿಯಮ ಮತ್ತು ಕಾಯ್ದೆಗಳ ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ಹಾಗೆಯೇ ಸರ್ಕಾರ ಮಾಡುವ ಆದೇಶಗಳ ಕಟ್ಟುನಿಟ್ಟಿನ ಅನುಷ್ಠಾನ ಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ರಚಿಸಲಾಗು ಡಿವುದು ಎಂದು ಮಾಧುಸ್ವಾಮಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ.ರವಿ, ಕನ್ನಡಿಗರು ಯಾರು ಎಂಬುದರ ಬಗ್ಗೆಯೇ ಸರೋಜಿನಿ ಮಹಿಷಿ ವರದಿಯಲ್ಲಿ ಗೊಂದಲಗಳಿವೆ. 15 ವರ್ಷ ವಾಸವಿದ್ದು, ಅವರಿಗೆ ಕನ್ನಡ ಬರದಿದ್ದರೂ ಪರಿಗಣಿಸಲಾಗುತ್ತದೆ. ಹೀಗಾಗಿ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಐಚ್ಛಿಕ ಭಾಷೆಯಾಗಿ ವ್ಯಾಸಂಗ ಮಾಡಿದವರನ್ನು ಕನ್ನಡಿಗರು ಎಂದು ಪರಿಗಣಿಸಬೇಕೆ ಎಂಬ ಚಿಂತನೆಯೂ ಸರ್ಕಾರದ ಮುಂದಿದೆ ಎಂದರು.

ಬೆರೆಕೆ ಕನ್ನಡ, ಮರೆತ ಕನ್ನಡ

ನಮ್ಮ ಮಕ್ಕಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣದ ಹಿಂದೆ ಬಿದ್ದಿದ್ದಾರೆ. ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ಕೋರುತ್ತಾರೆ. ಆದರೆ, ಕನ್ನಡ ಉಳಿಸುವ ಬಗ್ಗೆ ಚಿಂತಿಸುವುದಿಲ್ಲ. ಕನ್ನಡ ಮಾತನಾಡುವವರು ನಾವೇ ಕೊನೇ ಎನ್ನುವಂತಹ ಪರಿಸ್ಥಿತಿಯಿದೆ. ಮುಂದಿನ ಪೀಳಿಗೆ ಬೆರೆಕೆ ಕನ್ನಡ ಮಾತನಾಡಿದರೆ, ಅದಕ್ಕೂ ಮುಂದೆ ಮರೆತ ಕನ್ನಡವಾಗುವ ಭೀತಿಯಿದೆ ಎಂದು ಸಿ.ಟಿ.ರವಿ ಕನ್ನಡ ಅಳಿವಿನ ಬಗ್ಗೆ ಮಾರ್ವಿುಕವಾಗಿ ನುಡಿದರು.

ರಾಜ್ಯೋತ್ಸವ ಹೆಸರಲ್ಲಿ ವಸೂಲಿ

ಕನ್ನಡಿಗರಿಗೆ ಆದ್ಯತೆ ನೀಡುವುದರ ಜತೆಗೆ ಕನ್ನಡದ ಹೆಸರಲ್ಲಿ ದಂಧೆ ಮಾಡುವವರಿಗೂ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಕೆಲ ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವ ಸಂದರ್ಭ ಖಾಸಗಿ ಸಂಸ್ಥೆಗಳಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿವೆ. ಅಂತಹ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಹ ನಿಯಮಗಳು ಜಾರಿಯಾಗಬೇಕು ಎಂದು ಸಿ.ಟಿ.ರವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net