

ಹುಬ್ಬಳ್ಳಿ : ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ಮಾಡುವ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸೇವಾಭಾರತಿ ಟ್ರಸ್ಟ್ ಬಾಲ ಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಹೇಳಿದರು.
ಇಲ್ಲಿನ ಸೇವಾಭಾರತಿ ಟ್ರಸ್ಟ್ ಬಾಲ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ‘ಭಾರತ್ ಕೋ ಜಾನೋ’ (ಭಾರತವನ್ನು ತಿಳಿಯಿರಿ) ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುರಂತದ ಸಂಗತಿ ಎಂದರೆ ಬೇರೆ ದೇಶದ ನಾಗರಿಕರು ಭಾರತದ ಸಂಸ್ಕೃತಿಯನ್ನು ಗೌರವಿಸಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಭಾರತದಲ್ಲಿ ಹುಟ್ಟಿದವರು ನಮ್ಮ ಸಂಸ್ಕೃತಿಗೆ ಸೆಡ್ಡು ಹೊಡೆದು ಪಾಶ್ಚಾತ್ಯ ಸಂಸ್ಕೃತಿ ಅಳವಡಿಕೆಗೆ ಮುಂದಾಗಿರುವುದು ತಲೆತಗ್ಗಿಸುವ ಸಂಗತಿ. ನಮ್ಮ ದೇಶದ ವೈವಿಧ್ಯತೆ ತಿಳಿಯುವ ನಿಟ್ಟಿನಲ್ಲಿ ಇಂದಿನ ಮಕ್ಕಳು ಮುಂದಾಗಬೇಕು ಎಂದರು.
ಶಿಕ್ಷಣ ತಜ್ಞ ಮುಕುಂದ ಕುಲಕರ್ಣಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯ ಭಾರತದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಮಾಧುರಿ ಕುಲಕರ್ಣಿ, ಅಭಿಜಿತ ಕುಲಕರ್ಣಿ, ಅರ್ಚನಾ ಜೋಶಿ ರಸಪ್ರಸ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಎರಡು ಹಂತಗಳಲ್ಲಿ ನಡೆದ ಈ ರಸಪ್ರಸ್ನೆ ಕಾರ್ಯಕ್ರಮದಲ್ಲಿ 16 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತಿ ನಂದಕುಮಾರ ಸ್ವಾಗತಿಸಿದರು. ರತ್ನಾ ಮಾತಾಜಿ ನಿರೂಪಿಸಿದರು. ವೀಣಾ ಮಳಿಯೇ ವಂದಿಸಿದರು.
ಭರತ ಜೈನ್, ಶಂಕರ ಗುಮಾಸ್ತೆ, ಆಶಾ ಚೌಧರಿ, ಕರುಣಾ ಭಂಡಾರಿ, ಭಾಮಾ ಹಾಗೂ ಇತರರು ಇದ್ದರು.