

ಮೈಸೂರು: ನಿಮ್ಮ ಪಾಲಕರ ಕಷ್ಟ ನಿಮ್ಮ ಮನದಲ್ಲಿರಬೇಕು, ಕಷ್ಟಪಟ್ಟು ಓದಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಖ್ಯಾತ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಪಠ್ಯೆತರ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ಉತ್ತಮವಾಗಲೆಂದು ಪಾಲಕರು ಕಷ್ಟಪಟ್ಟು ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಒಬ್ಬೊಬ್ಬರ ಮನೆಯ ಕಷ್ಟ ಒಂದೊಂದು ರೀತಿ ಇರುತ್ತದೆ. ಕಷ್ಟಪಟ್ಟು ಓದಿ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುರುವಿನ ಆಶೀರ್ವಾದವೇ ಶ್ರೆಯಸ್ಸು. ಗುರುಗಳೇ ವಿದ್ಯಾರ್ಥಿಗಳ ಬಾಳಿನ ನಂದಾದೀಪ. ವಿದ್ಯಾ ಗುರುಗಳಿಗೆ ಶರಣೆಂದು ಬಾಳುವವರೇ ಶರಣರು. ಗುರುವಿನ ಗುಲಾಮನಾಗುವ ತನಕ ದೊರೆಯದು ಮುಕುತಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಜೀವ ತೇಯ್ದರೂ ಗುರುವಿನ ಋಣ ತೀರಿಸಲಾಗದು. ಹಾಗಾಗಿ ವಿದ್ಯಾರ್ಥಿನಿಯರು ಗುರುಗಳ ಪಾಠ ಮಾಡುವಾಗ ಮೊಬೈಲ್ ನೋಡಿದರೆ ಜೀವನ ರೂಪಿಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.
ವಿದ್ಯಾಭ್ಯಾಸ ಮುಗಿಸಿದ ಬಳಿಕ ಉದ್ಯೊಗ ಸಿಕ್ಕರೆ ಒಳ್ಳೆಯದು. ಇಲ್ಲದಿದ್ದರೆ ಸ್ವಯಂ ಉದ್ಯೊಗ ಮಾಡಬೇಕು. ಕಲೆಗೆ ಮನಸೋತರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು, ಅದಕ್ಕೆ ನಾನೇ ಉದಾಹರಣೆ. ಒಂದು ಹೊತ್ತಿನ ಊಟಕ್ಕಾಗಿ ಪದ ಕಲಿತೆ. ಇವತ್ತು ಕೋಟ್ಯಂತರ ರೂ. ಸಂಪಾದಿಸಿದ್ದೇನೆ. ಕರ್ಮದ ದಾರಿಯಲ್ಲಿ ಹೋಗದೆ ಧರ್ಮದ ಹಾದಿಯಲ್ಲಿ ಹೋದರೆ ಭಗವಂತ ನಮ್ಮನ್ನು ಕಾಪಾಡುತ್ತಾನೆ ಎಂದು ಹೇಳಿದರು.
ಆ ಕಾಲದಲ್ಲಿಯೇ ಬಿಳಿಗಿರಿ ರಂಗಯ್ಯ ಅಂತರ್ಜಾತಿ ವಿವಾಹವಾಗಿದ್ದಾರೆ. ಬ್ರಾಹ್ಮಣನಾದ ತಿರುಪತಿ ತಿಮ್ಮಪ್ಪ ಸೋಲಿಗರ ಹೆಣ್ಣು ಮಗಳಾದ ಕುಸುಮಾಬಾಲೆಯ ಅಂದಕ್ಕೆ ಮನಸೋತು ಪ್ರಿತಿಸಿ ವಿವಾಹವಾದ. ಇದನ್ನೇ ನಮ್ಮ ಜನಪದರು ಪದ ಕಟ್ಟಿ ಹಾಡಿದರು ಎಂದ ಮಹದೇವಸ್ವಾಮಿ ಅವರು, ‘ಅನ್ಯಾಯ್ಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ಗೀತೆಯನ್ನು ಹಾಡಿ ವಿದ್ಯಾರ್ಥಿನಿಯರನ್ನು ರಂಜಿಸಿದರು.
ಮಹದೇಶ್ವರ, ಮಂಟೇಸ್ವಾಮಿ, ಯಡಿಯೂರು ಸಿದ್ಧಲಿಂಗೇಶ್ವರ ಮುಂತಾದ ಪವಾಡ ಪುರುಷರು ಜೋಳಿಗೆ ಹಾಕೊಂಡು ಊರೂರು ತಿರುಗಿ ಭೀಕ್ಷೆ ಮಾಡುತ್ತ ಜನರಿಗೆ ತಿಳಿವಳಿಕೆ ಹೇಳುತ್ತ ಒಂದು ಕಡೆ ಐಕ್ಯವಾದರು ಎಂದರು.
ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಟ ಕಡೂರು ಧರ್ಮಣ್ಣ, ಪಠ್ಯೇತರ ಚಟುವಟಿಕೆ ಸಂಚಾಲಕ ಡಾ.ನಂಜುಂಡಸ್ವಾಮಿ, ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಜಿ.ಎಸ್.ಜೇನುಶ್ರೀ ಇದ್ದರು.