ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ

24 KRN-1
ಕೆ.ಆರ್.ನಗರ ಪಟ್ಟಣದ ಆಲ್ಫಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಕಾರ್ಯಾಗಾರದಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಮತ್ತು ಕುಟುಂಬದವರಾದ ಸೂರಜ್ ತಂದೆ ಕೆ.ಬಿ.ಲಿಂಗರಾಜು, ತಾಯಿ ಗೀತಾರಾಜು, ಅಜ್ಜಿ ಪ್ರೇಮಮ್ಮ ಅವರನ್ನು ಸನ್ಮಾನಿಸಲಾಯಿತು. ಆಲ್ಪಾ ಕಾಲೇಜಿನ ಕಾರ್ಯದರ್ಶಿ ವೈ.ಎಸ್.ಸುಬ್ರಹ್ಮಣ್ಯ, ಪ್ರಾಂಶುಪಾಲ ನವೀನ್, ಉಪನ್ಯಾಸಕರಾದ ಕೆ.ಎಲ್.ರಮೇಶ್, ಗಣೇಶ್, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭ ಸ್ವಾಮಿ, ಯುವ ರೈತ ಘಟಕದ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಇದ್ದರು.
Published on

 ಕೆ.ಆರ್.ನಗರ: ಪ್ರತಿಯೊಬ್ಬರು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆಯಿಂದ ನಿರಂತರವಾಗಿ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ನಂತರದ ಜೀವನ ಸುಖಮಯವಾಗಲಿದೆ ಎಂದು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಹೇಳಿದರು.

ಪಟ್ಟಣದ ಆಲ್ಫಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲ ವಿದ್ಯಾರ್ಥಿಗಳಿಗೂ 18 ರಿಂದ 26ನೇ ವಯಸ್ಸಿನಲ್ಲಿ ಕಲಿಯುವ ವಿದ್ಯೆ ಬಹಳ ಮುಖ್ಯವಾಗಿದ್ದು, ಅದನ್ನು ಕಳೆದುಕೊಂಡರೆ ಮತ್ತೆ ಸಾಧನೆ ಮಾಡಲು ಹೆಚ್ಚಿನ ಕಾಲ ವಿಳಂಬವಾಗಲಿದೆ. ಆದ್ದರಿಂದ ಸೀಮಿತ ಅವಧಿಯಲ್ಲಿ ಹೆಚ್ಚಿನ ಪರಿಶ್ರಮ ಪಟ್ಟರೆ ಉನ್ನತ ಹುದ್ದೆ ಪಡೆಯಲು ಸುಲಭ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳ ಸೆಳೆತಕ್ಕೆ ಒಳಗಾಗದೆ, ವಿದ್ಯಾರ್ಥಿ ಜೀವನವನ್ನು ವ್ಯಯಮಾಡದೆ ಜ್ಞಾನ ಸಂಪಾದನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಅವಕಾಶಗಳ ಬಗ್ಗೆ ತಿಳಿಸಿಕೊಡಲು ಈಗ ತಾನೇ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಪಿಎಸ್ ಆಗಿ ಆಯ್ಕೆ ಆಗಿರುವ ಸೂರಜ್ ಅವರು ನಮ್ಮ ಸಂಸ್ಥೆಗೆ ಆಗಮಿಸಿ ಉಪಯುಕ್ತ ಮಾಹಿತಿ ನೀಡಿರುವುದು ಬಹಳ ಸಂತೋಷ ಮತ್ತು ವಿದ್ಯಾರ್ಥಿಗಳ ಸುಯೋಗ ಎಂದು ಹರ್ಷ ವ್ಯಕ್ತಪಡಿಸಿದರು.

ಸೂರಜ್ ತಂದೆ ಕೆ.ಬಿ.ಲಿಂಗರಾಜು, ತಾಯಿ ಗೀತಾರಾಜು, ಅಜ್ಜಿ ಪ್ರೇಮಮ್ಮ, ಆಲ್ಫಾ ಕಾಲೇಜಿನ ಅಧ್ಯಕ್ಷ ರವಿಕುಮಾರ್, ಪ್ರಾಂಶುಪಾಲ ನವೀನ್, ಉಪನ್ಯಾಸಕರಾದ ಕೆ.ಎಲ್.ರಮೇಶ್, ಗಣೇಶ್, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭ ಸ್ವಾಮಿ, ರಾಷ್ಟ್ರೀಯ ಅಹಿಂದ ಸಂಘಟನೆ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಗರುಡಗಂಭ ಮಂಜು, ಯುವ ರೈತ ಘಟಕದ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್, ಮುಖಂಡರಾದ ಪುಟ್ಟು, ಸಮಂತ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net