

ಮಂಡ್ಯ: ಮನುವಾದಿ, ಕೋಮುವಾದಿ ಹಾಗೂ ಹಿಂದುತ್ವವಾದಿಗಳಿಂದ ದಲಿತರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಕರೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ(ಕರ್ನಾಟಕ)ದ ಸಹಯೋಗದಲ್ಲಿ ಆಯೋಜಿಸಿದ್ದ ಜಾತಿ ಅಸ್ಪಶ್ಯತೆ ನಿವಾರಣೆ ಮತ್ತು ಐಕ್ಯತೆಗಾಗಿ ದಲಿತರ, ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.
ಜಮೀನು ಹೊಂದಿಲ್ಲದ ದಲಿತರಿಗೆ 2018ರಿಂದ ಒಂದು ಎಕರೆ ಜಮೀನು ಕೊಡುವುದಕ್ಕೆ ಆಗಿಲ್ಲ. ಇವರಿಗೆ ಕೊಡಲು ಜಮೀನಿಲ್ಲ ಎನ್ನುತ್ತಾರೆ. ಅದೇ ಕೈಗಾರಿಕೆ, ಬಂಡವಾಳಶಾಹಿ ಹಾಗೂ ಮಠಗಳಿಗೆ ಭೂ ಸ್ವಾಧೀನ ಮಾಡಿಕೊಂಡು ಕೊಡುತ್ತೀರಾ?. ದಲಿತರಿಗೂ ಅದೇರೀತಿ ಭೂ ಸ್ವಾಧೀನ ಮಾಡಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಉಪಯೋಜನೆ ಪರಿಣಾಮವಾಗಿ ಜಾರಿ ಮಾಡಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಭೂ ಒಡೆತನ ಯೋಜನೆಯಡಿ ಭೂಸ್ವಾಧೀನ ಮಾಡಿ ದಲಿತರಿಗೆ ಭೂಮಿ ಕೊಡಬೇಕು. ಗ್ಯಾರಂಟಿ ಯೋಜನೆಯ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗೆ 42,018 ಕೋಟಿ ರೂ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ ದಲಿತರಿಗೆ ಹಣ ಹಂಚುವಲ್ಲಿ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿದರು.
ಒಳಮೀಸಲಾತಿಗಾಗಿ ನಾಗಮೋಹನ್‌ದಾಸ್ ಆಯೋಗವು ಮಧ್ಯಂತರ ವರದಿಯನ್ನು ಕೊಟ್ಟಿದೆ. ಈ ಸಮೀಕ್ಷೆಯಲ್ಲಿ ಪಾರದರ್ಶಕತೆಯಾಗಿ ನಡೆಯಬೇಕಾದರೆ ಸ್ಥಳೀಯ ಶಿಕ್ಷಕರು ಕೆಲಸ ಮಾಡುವಂತಾಗಬೇಕು. ಕಂಪ್ಯೂಟರ್‌ನಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿರುವುದರಿಂದ ಸರ್ವರ್’ ಸಮಸ್ಯೆ ಗಂಭೀರವಾಗಿದೆ. ಇದನ್ನು ಸರ್ಕಾರ ಮತ್ತು ಆಯೋಗ ಗಮನಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಈಗಿರುವ ಸವಾಲುಗಳನ್ನು ಅಮೂಲಾಗ್ರವಾಗಿ ಬದಲಾಯಿಸಲು ಬೇಕಿರುವಂತಹ ಕಾರ್ಯವ್ಯೆಹವಾಗಲಿ ಚಟುವಟಿಕೆಯಾಗಲಿ ದಲಿತ ಸಂಘಟನೆಗಳಲ್ಲಿ ಕಾಣುತ್ತಿಲ್ಲ. ಅನೇಕ ದಲಿತ ಚಳವಳಿ ದಲಿತರ ಸಮಸ್ಯೆಯನ್ನು ಕೇವಲ ದಲಿತರ ಸಮಸ್ಯೆ ಎಂದು ನೋಡಲಾಗುತ್ತಿರುವುದೇ ಕಾರಣವಾಗಿದೆ. ದಲಿತರ ಹಕ್ಕುಗಳ ಬಗ್ಗೆ ಕಾಳಜಿ ಇರುವಂತಹ ಎಲ್ಲ ಮನಸ್ಸುಗಳ ಸಂಘಟನೆಯ ಕೆಲಸವಾಗಿ ದಲಿತ ಹಕ್ಕುಗಳ ಸಮಿತಿ ಕೆಲಸ ಮಾಡುತ್ತಿದೆ. ಇದು ಪ್ರಧಾನ ಪಾತ್ರವನ್ನು ವಹಿಸಿದೆ. ಒಗ್ಗಟ್ಟಾಗಿ ಹೋರಾಟ ಮಾಡಬೇಕೆನ್ನುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ದಲಿತರ ಭೂಮಿಯ ಮತ್ತು ಉದ್ಯೋಗ ಪ್ರಶ್ನೆಯನ್ನು ನಿವಾರಿಸದೇ ಹೊರತು ಯಾವುದೇ ಕಾರಣಕ್ಕೂ ದಲಿತರಿಗೆ ಸಮಾನತೆ ಸಿಗುವುದಿಲ್ಲ ಎಂದು ಪ್ರತಿಪಾದಿಸಿದರು.
ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ, ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷ ಎಚ್.ಜಿ.ನಾಗಣ್ಣ, ಕಾರ್ಯದರ್ಶಿ ಅಂಬೂಜಿ, ಸಹ ಕಾರ್ಯದರ್ಶಿಗಳಾದ ಎನ್.ನಾಗರಾಜು, ಪೃಥ್ವಿ ಇದ್ದರು.