

ಮೈಸೂರು: ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರೇಮಿಗಳ ದಿನ ಬಿಡಿ, ಹಿರಿಯರನ್ನು ಗೌರವಿಸಿ ಎನ್ನುವ ಸಂದೇಶ ಸಾರಲು ತಮ್ಮ ಪಾಲಕರಿಗೆ ಪಾದಪೂಜೆ ನೆರವೇರಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನಾಚರಣೆ ಬದಲು ಹಿಂದುತ್ವದ ಸಂಸ್ಕಾರ ಸಂಸ್ಕೃತಿಯಂತೆ ಹಿರಿಯರನ್ನು ಪ್ರೀತಿಸೋಣ ಎನ್ನುವ ಘೋಷ ವಾಕ್ಯದೊಂದಿಗೆ ಪಾಲಕರ ಪಾದ ತೊಳೆದು ಕುಂಕುಮ ಅರಿಶಿಣ ಹಾಗೂ ಮಂಗಳಾರತಿ ಮಾಡಿ ಹಿರಿಯರ ಆಶೀರ್ವಾದ ಪಡೆದರು.
ಸಂಸ್ಥೆಯ ಸಿಇಒ ತೇಜಸ್‌ಶಂಕರ್ ಮಾತನಾಡಿ, ಪ್ರತಿ ವರ್ಷ ಫೆ. 14 ರಂದು ತಂದೆ-ತಾಯಿ ಪೂಜೆ ದಿನ ಆಚರಿಸಲಾಗುತ್ತದೆ. ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಮಕ್ಕಳು ನಿತ್ಯ ಪಾಲಕರ ಪೂಜೆ ಮಾಡಬೇಕು. ಅವರ ಆಜ್ಞೆ ಪಾಲಿಸಬೇಕು. ಅವರನ್ನು ಗೌರವದಿಂದ ಕಾಣಬೇಕು. ತಂದೆ-ತಾಯಿ ಮಕ್ಕಳನ್ನು ಸಲಹುತ್ತಾರೆ. ಉತ್ತಮ ಸಂಸ್ಕಾರ ನೀಡುತ್ತಾರೆ. ಅವರಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ ಎಂದು ಹೇಳಿದರು.
ಮಕ್ಕಳು ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರ ಋಣ ತೀರಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು ಎಂದು ಹೇಳಿದರು.
ವಿವಿಧ ಸಂಘಟನೆಯ ರಾಘವೇಂದ್ರ, ರೇಖಾ ಶ್ರೀನಿವಾಸ್, ಖುಷಿ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಅಪೂರ್ವ ಸುರೇಶ್, ಜೇತ್ತಿ ಪ್ರಸಾದ್, ಅನಿತಾ, ಶೈಲಜಾ, ಪ್ರಿಯಾಂಕಾ , ಅಂಕಿತಾ ಇತರರು ಇದ್ದರು.