ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿಸಿ: ಕೆ.ರಾಮರಾಜನ್

26adarshkdga4
Published on

ಮಡಿಕೇರಿ: ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆಶಯ ವ್ಯಕ್ತಪಡಿಸಿದರು.


ಜಿಲ್ಲಾ ಪಂಚಾಯಿತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕು ಎಂಬ ಭಾವನೆ, ಮನೆಯ ವಾತಾವರಣ, ಹೀಗೆ ಅನೇಕ ಕಾರಣಗಳಿಗಾಗಿ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಾರೆ. ವಿದ್ಯಾರ್ಥಿಗಳ ಮಾದಕ ವಸ್ತುಗಳಿಂದ ದೂರವಿರಬೇಕು. ನಾಳೆಯ ಬಗ್ಗೆ ಚಿಂತಿಸುವಂತಾಗಬೇಕು. ಮಾನವನ ಜೀವನ ಅತ್ಯಂತ ಅಮೂಲ್ಯ, ಆದ್ದರಿಂದ, ಜೀವನದಲ್ಲಿ ಭವಿಷ್ಯದಲ್ಲಿ ಉತ್ತಮ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.


ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗಾಬಾರದು. ಮಾದಕ ವಸ್ತುಗಳಿಗೆ ಅವಲಂಬಿತರಾದರೆ ಅದರಿಂದ ಪುನಃ ಹೊರಬರುವುದು ತುಂಬ ಕಷ್ಟ. ಹಾಗೂ ಮಾದಕ ವಸ್ತುಗಳನ್ನು ಬಳಸುವುದರಿಂದ ಅಪರಾಧಗಳನ್ನು ಮಾಡುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಬೇಕು ಮತ್ತು ತಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನದಲ್ಲಿ ಇಂತಹ ದುಶ್ಚಟಗಳಿಂದ ದೂರವಿರಬಹುದು ಎಂದು ಸಲಹೆ ಮಾಡಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ಯುವಕರಲ್ಲಿ, ಮಕ್ಕಳಲ್ಲಿ, ವಯಸ್ಕರಲ್ಲಿ ಮಾದಕ ವಸ್ತು ಮತ್ತು ಮಾನವ ಕಳ್ಳಸಾಗಣಿಕೆ ಹೆಚ್ಚುತ್ತಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ತೆಯ ಮೇಲೆ ತೀವ್ರ ದುಷ್ಪಾರಿಣಾಮ ಬೀರುತ್ತಿದೆ. ಇವುಗಳನ್ನು ಹತ್ತಿಕ್ಕುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಸಮಾಜದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿಗಳಿಗೆ ಈ ಹಂತದಲ್ಲಿ ಶಿಕ್ಷಣ, ಸಮಾಲೋಚನೆ, ಮಾರ್ಗದರ್ಶನ ಅತಿ ಅವಶ್ಯಕವಾಗಿದೆ. ಆದ್ದರಿಂದ ಶಿಕ್ಷಕರೊಂದಿಗೆ ಹಾಗೂ ಪಾಲಕರೊಂದಿಗೆ ಸಮಾಲೋಚಿಸಿ ಇದರ ಬಗ್ಗೆ ಹೆಚ್ಚು ಒತ್ತು ನೀಡಬೇಕು. ತಮ್ಮ ಸಹಪಾಠಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದರೆ ಶಾಲಾ ಮುಖ್ಯಸ್ಥರು ಹಾಗೂ ಪಾಲಕರಿಗೆ ತಿಳಿಸಬೇಕು. ಇಂತಹ ಮಾದಕ ವಸ್ತುಗಳ ನಿರ್ಮೂಲನೆಗಾಗಿ ಕಾನೂನ ಸೇವಾ ಪ್ರಾಧಿಕಾರ ವಿವಿಧ ಇಲಾಖೆಗಳ ಸಹಯೋಗದಿಂದ ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹೀಗೆ ನಾನಾ ಹಂತಗಳಲ್ಲಿ ಮಾದಕ ವಸ್ತುಗಳ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.


ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ದೇಶದಲ್ಲಿ ಯುವಕರ ಪ್ರಮಾಣ ಹೆಚ್ಚಿದೆ. ಇಂತಹ ಮಾದಕ ವಸ್ತುಗಳ ಸೇವನೆಗೆ ತುತ್ತಾದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಜನರು ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಪದಾರ್ಥಗಳನ್ನು ಬಳಸುವುದರಿಂದ ಮಾನಸಿಕ ಖಿನ್ನತೆ, ನಿದ್ರಾಹೀನತೆ ಸೇರಿದಂತೆ ಗಂಭೀರವಾದ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.


ಮನೋವೈದ್ಯರಾದ ಡಾ.ಡೇವಿನ್ ಲಿನೇಕರ್ ಕರ್ಕಡರವರು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿ, ಮಾದಕವಸ್ತುಗಳ ಚಟಕ್ಕೆ ದಾಸರಾಗಬೇಡಿ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಮಾದಕ ವಸ್ತುಗಳ ಬಳಕೆಗೆ ಇಳಿದವರು ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ಅನವಶ್ಯಕ ವಿವಾದಗಳನ್ನು ಸೃಷ್ಠಿಸುವುದು ಮೊದಲಾದ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗುವುದು ಕಂಡು ಬರುತ್ತದೆ. ಆದ್ದರಿಂದ ಇದರಿಂದ ದೂರವಿರಬೇಕು ಎಂದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ಟೆಲಿ-ಮನಸ್ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎನ್.ಆನಂದ ಹಾಗೂ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net