ಜಲಾವೃತವಾದ ಗೂಗಿ ಹಳ್ಳದ ಸೇತುವೆ , 5 ತಾಸು ರಸ್ತೆಯಲ್ಲಿಯೇ ಕಳೆದ ವಿದ್ಯಾರ್ಥಿಗಳು

1-KND-1-RAIN
Published on

ಕುಂದಗೋಳ: ತಾಲೂಕಿನ ಗಡಿ ಭಾಗದಲ್ಲಿ ಗುರುವಾರ ಸಂಜೆ ಭಾರಿ ಮಳೆಯಾದ ಪರಿಣಾಮ ಸಂಶಿ -ಚಾಕಲಬ್ಬಿ ನಡುವಿನ ಗೂಗಿ ಹಳ್ಳದ ಸೇತುವೆ ಜಲಾವೃತವಾಗಿದ್ದರಿಂದ ನಾಲ್ಕೈದು ತಾಸು ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡಿದರು.


ಬೆಳಗ್ಗೆ ಶಾಲೆಗೆ ಹೋದ ಮಕ್ಕಳು, ಕೂಲಿ ಕಾರ್ವಿುಕರು ಹಾಗೂ ಮಹಿಳೆಯರು ರಾತ್ರಿ 10.30ರವರೆಗೂ ಸೇತುವೆಯ ಒಂದು ಬದಿ ನಿಂತು ನೀರು ಕಡಿಮೆಯಾಗಲಿ ಎಂದು ಕಾಯುತ್ತಿದ್ದರು. ಸಂಜೆ 4.30ಕ್ಕೆ ಸೇತುವೆ ಜಲಾವೃತವಾಗಿದ್ದರಿಂದ ಮನೆ ತಲುಪುದರೊಳಗೆ ಮಧ್ಯ ರಾತ್ರಿಯೇ ಆಗಿತ್ತು.


ಗ್ರಾ.ಪಂ. ಸದಸ್ಯ ವಿಠ್ಠಲ ಘಾಟಗೆ ಮಾತನಾಡಿ, ನಮ್ಮ ಊರಿಗೆ ಸಂಪರ್ಕದ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿ ಮಳೆಗಾಲದಲ್ಲೂ ಇದೆ ಪರಿಸ್ಥಿತಿ ಇರುತ್ತದೆ. ಕಳೆದ ವರ್ಷ 50 ಲಕ್ಷ ರೂಪಾಯಿ ಹಣ ವ್ಯಯ ಮಾಡಿದ್ದು, ವ್ಯರ್ಥವಾಗಿದೆ. ನಮಗೆ ದೊಡ್ಡ ಸೇತುವೆ ನಿರ್ವಿುಸಿ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದರು.


ರಾತ್ರಿ ಬಸ್ ಸೇತುವೆ ಬಳಿ ನಿಂತು ಹಳ್ಳದ ನೀರು ಕಡಿಮೆಯಾದ ಮೇಲೆ ಊರಿಗೆ ತೆರಳಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಯಾಣಿಕರನ್ನು ವಿಚಾರಿಸಿದರು ಆಗ ಶಾಲಾ ಮಕ್ಕಳು ನಾವು 5 ಗಂಟೆಗೆ ಶಾಲೆ ಬಿಟ್ಟಿದ್ದೇವೆ. 9 ಗಂಟೆಯಾದರೂ ಮನೆಗೆ ತೆರಳಲು ಆಗಲಿಲ್ಲ, ನಮಗೆ ಬಹಳ ಸಮಸ್ಯೆಯಾಗಿದೆ ಕೂಡಲೆ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net