ಅಂತರ ಮರೆತ ವಿದ್ಯಾರ್ಥಿಗಳು ; ಪಿಯು ಇಂಗ್ಲಿಷ್ ಪರೀಕ್ಷೆ ನೋಂದಣಿ ಸಂಖ್ಯೆ ನೋಡಲು ಮುಗಿಬಿದ್ದರು

18TMK_PU_1_GPUC_TUMKUR 1
Published on

ತುಮಕೂರು: ಪರೀಕ್ಷೆ ಬರೆಯುವ ಧಾವಂತದಲ್ಲಿ ಪರಸ್ಪರ ಅಂತರ ಮರೆತ ಪಿಯು ವಿದ್ಯಾರ್ಥಿಗಳು ಕರೊನಾ ಭೀತಿ ಲೆಕ್ಕಿಸಲಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂಭಾಗವೇ ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆ ಆರಂಭವಾಗುವ ಮುಂಚೆ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನೋಡಲು ಮುಗಿಬಿದ್ದರು.

ಕರೊನಾ ಆತಂಕದ ನಡುವೆಯೇ ಗುರುವಾರ ಜಿಲ್ಲೆಯ 34 ಪರೀಕ್ಷಾ ಕೇಂದ್ರದಲ್ಲಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯಲ್ಲಿ ನೋಂದಣಿಯಾಗಿದ್ದ 24970 ವಿದ್ಯಾರ್ಥಿಗಳ ಪೈಕಿ 1457 ಗೈರಾಗಿದ್ದರು. 23513 ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟರು.

ಬಹುದಿನದ ನಂತರ ಕಾಲೇಜುಗಳ ಕಡೆ ಮುಖಮಾಡಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ನೀಡುತ್ತಿದ್ದ ಸೂಚನೆಗಳನ್ನು ಲೆಕ್ಕಿಸದೆ ಒಮ್ಮೆಲೆ ನೋಂದಣಿ ಸಂಖ್ಯೆ ಇರುವ ಕೊಠಡಿಗಳನ್ನು ತಿಳಿಯಲು ಆತುರಪಟ್ಟು ಒಬ್ಬರ ಮೇಲೊಬ್ಬರು ಮುಗಿಬಿದ್ದರು. ಸಾಕಷ್ಟು ದಿನದ ನಂತರ ಸಿಕ್ಕ ಸ್ನೇಹಿತರೊಂದಿಗೆ ಸಲುಗೆಯಿಂದಲೇ ಸೇರಿ ಪರೀಕ್ಷೆ ಕುರಿತು ವಿಷಯ ಹಂಚಿಕೊಂಡ ವಿದ್ಯಾರ್ಥಿಗಳ ವರ್ತನೆ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಬಗ್ಗೆ ಆತಂಕಿಸುವಂತೆ ಮಾಡಿತು.

ಪರೀಕ್ಷಾ ಕೇಂದ್ರದಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮವಹಿಸಲಾಗಿತ್ತು. ಕೊಠಡಿಯೊಂದರಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ ನಿಯಮ ಪಾಲಿಸಲಾಯಿತು. ಪರೀಕ್ಷೆಗೆ ನೋಂದಣಿಯಾದ ಜಿಲ್ಲೆಯ 24300, ಹೊರ ಜಿಲ್ಲೆಯ 665 ಹಾಗೂ ಹೊರ ರಾಜ್ಯದ 5 ವಿದ್ಯಾರ್ಥಿಗಳು ಸೇರಿ 24970 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯ 22851, ಹೊರ ಜಿಲ್ಲೆಯ 657 ಹಾಗೂ ಹೊರ ರಾಜ್ಯದ 5 ವಿದ್ಯಾರ್ಥಿಗಳು ಸೇರಿ 23513 ಪರೀಕ್ಷೆ ಬರೆದರು.

ಜಿಲ್ಲೆಯ 1449 ಹಾಗೂ ಹೊರ ಜಿಲ್ಲೆಯ 8 ವಿದ್ಯಾರ್ಥಿಗಳು ಸೇರಿ 1457 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಯು ಶಾಂತಿಯುತವಾಗಿ ನಡೆದಿದ್ದು, ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ. ನೂರಾರು ವಿದ್ಯಾರ್ಥಿಗಳು ಏಕಕಾಲಕ್ಕೆ ಕಾಲೇಜಿಗೆ ಆಗಮಿಸಿದ್ದರಿಂದ ಎಲ್ಲರೂ ನೋಂದಣಿ ಸಂಖ್ಯೆ, ಕೊಠಡಿ ಸಂಖ್ಯೆ ನೋಡಲು ಅನಿವಾರ್ಯವಾಗಿ ಮುಗಿಬಿದ್ದರು. ಎಲ್ಲರ ದೇಹದ ಉಷ್ಣಾಂಶ ನೋಡಲು ಸರತಿ ಸಾಲಿನಲ್ಲಿ ನಿಲ್ಲಿಸಲಾಯಿತಾದರೂ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ.

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಡಿಡಿಪಿಯು ಲಲಿತಾಕುಮಾರಿ ಸಾಥ್ ನೀಡಿದರು. ಸರ್ಕಾರಿ ಎಂಪ್ರೆಸ್ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳ ನೂಕುನುಗ್ಗಲು ಕಾಣಿಸಿತು. ಎಲ್ಲ ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಳಸಿದರೂ ಕೆಲವು ವಿದ್ಯಾರ್ಥಿಗಳು ಕರವಸ್ತ್ರ, ವೇಲ್‌ಗಳನ್ನು ಮಾಸ್ಕ್‌ನಂತೆ ಬಳಸಿಕೊಂಡು ಪರೀಕ್ಷೆ ಬರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net