

ವಿಜಯವಾಣಿ ಸುದ್ದಿಜಾಲ ಹಾಸನ
ನಗರದ ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ವಿದ್ಯಾರ್ಥಿಗಳು ಗುರುವಾರ ಉಚಿತ ಲ್ಯಾಪ್‌ಟಾಪ್‌ಗಾಗಿ ಪರಸ್ಪರ ನೂಕಾಟದಲ್ಲಿ ಸಿಲುಕಿ ಕರೊನಾ ಸೋಂಕು ಹರಡುವ ಆತಂಕ ಮರೆತು ವರ್ತಿಸಿದರು.
ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ ಶಾಸಕ ಪ್ರೀತಂ ಜೆ.ಗೌಡ ಅವರಿಂದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಪದವಿ ಪ್ರವೇಶ ನಡೆಯುತ್ತಿತ್ತು. ಮುಖ್ಯದ್ವಾರದಿಂದ ಸೀಮಿತ ವಿದ್ಯಾರ್ಥಿಗಳನ್ನು ಮಾತ್ರ ಬಿಡಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳು ಚೀರಾಡುತ್ತ ಏಕಾಏಕಿ ಒಬ್ಬರ ಮೇಲೊಬ್ಬರು ಬಿದ್ದರು. ವಿದ್ಯಾರ್ಥಿಗಳ ಉಪಟಳ ತಾಳಲಾರದೆ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸುತ್ತಿದ್ದಂತೆ ಎಲ್ಲರೂ ರ‌್ಯಾಪ್ ಕಡೆಗೆ ವಾಲಿದರು. ಪರಿಣಾಮ ಅದು ಮುರಿದು ನಿಯಂತ್ರಣ ತಪ್ಪಿ ಒಬ್ಬರ ಮೇಲೊಬ್ಬರು ಬಿದ್ದರು. ಪ್ರವೇಶಾತಿ ಹಾಗೂ ಲ್ಯಾಪ್ ಟಾಪ್‌ಗಾಗಿ ವಿದ್ಯಾರ್ಥಿಗಳು ಒಂದೇ ಸಲ ಹೆಚ್ಚಾದ್ದರಿಂದ ನೂಕುನುಗ್ಗಲು ಉಂಟಾಯಿತು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಕೆ.ಟಿ. ಮಹೇಂದ್ರಕುಮಾರ್ ಹೇಳಿದರು.