

ಹನೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಠಾಣೆಗೆ ಆಗಮಿಸಿದ್ದ ಪಟ್ಟಣದ ಶ್ರೀ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಪೊಲೀಸರ ಕಾರ್ಯವೈಖರಿ ಅರಿತರು.
ಠಾಣೆಗೆ ಆಗಮಿಸಿದ ವಿದ್ಯಾರ್ಥಿಗಳು ಮೊದಲು ಪೊಲೀಸರನ್ನು ಪರಿಚಯ ಮಾಡಿಕೊಂಡರು. ಪೊಲೀಸರು ನಿರ್ವಹಿಸುವ ಕಾರ್ಯವನ್ನು ತಿಳಿದರು. ಬಂದಿಖಾನೆಯನ್ನು ವೀಕ್ಷಿಸಿದರು. ಸಾರ್ವಜನಿಕರು ನೀಡುವ ದೂರು ಹಾಗೂ ದಾಖಲಾಗುವ ಪ್ರಕರಣಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಠಾಣೆ ಹಾಗೂ ಪೊಲೀಸರು ನಿರ್ವಹಿಸಬೇಕಾದ ಸಂಪೂರ್ಣ ಕಾರ್ಯ ವಿಧಾನದ ಬಗ್ಗೆ ತಿಳಿಸಿಕೊಟ್ಟರು.
ಇನ್‌ಸ್ಪೆಕ್ಟರ್ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತೆರೆದ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ತಿಳಿದುಕೊಳ್ಳಬೇಕು. ಬಾಲ್ಯ ವಿವಾಹ ಕಾನೂನಿನ ಅಪರಾಧವಾಗಿದ್ದು, ಸಂಬಂಧಪಟ್ಟವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೂ ಹನೂರು ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ವಿಪರ್ಯಾಸ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸುವುದರ ಮೂಲಕ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಗ್ರಾಮಗಳಲ್ಲಿ ಬಾಲ್ಯ ವಿವಾಹ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಹಾಯವಾಣಿ 112ಗೆ ಕರೆ ಮಾಡಿ: ಇತ್ತೀಚಿನ ದಿನಗಳಲ್ಲಿ ಖದೀಮರು ಎಟಿಎಂ ಕಾರ್ಡ್ ವಂಚಿಸಿ ಹಣವನ್ನು ಲಪಟಾಯಿಸುವ ಪ್ರಕರಣಗಳು ಹೆಚ್ಚುತ್ತಿದೆ. ಆದ್ದರಿಂದ ಈ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡಬೇಕು. ಬೈಕ್ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ತಿಳಿಸುವುದರ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕು. ಇನ್ನು ಸಮಸ್ಯೆಗೆ ಸಿಲುಕಿದ್ದಲ್ಲಿ ಅಥವಾ ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಗಿ 112ಗೆ ಕರೆ ಮಾಡಬಹುದು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಸ್ಪಂದಿಸಲಿದ್ದಾರೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಎಎಸ್‌ಐ ಕೃಷ್ಣ, ಶಿಕ್ಷಕರಾದ ಲಿಲ್ಲಿ, ಬಸವಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.