

ಮುಂಡರಗಿ: ಪಟ್ಟಣದ ಕ.ರಾ. ಬೆಲ್ಲದ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೋಶ ಹಾಗೂ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಶನಿವಾರ ಸ್ಥಳೀಯ ಸಹಕಾರಿ ವಲಯದ ಕೆಸಿಸಿ ಬ್ಯಾಂಕ್‌ಗೆ ವಿದ್ಯಾರ್ಥಿಗಳು ಭೇಟಿ ನೀಡಿ, ಮಾಹಿತಿ ಪಡೆಯಲಾಯಿತು.
ಬ್ಯಾಂಕ್ ಸಹಾಯಕ ನಿರ್ದೇಶಕ ಎಸ್.ವಿ. ಪಾಟೀಲ ಅವರು 1905ರಲ್ಲಿ ಏಷ್ಯಾ ಖಂಡದಲ್ಲಿಯೇ ಮೊಟ್ಟ ಮೊದಲ ಸಹಕಾರಿ ಬ್ಯಾಂಕ್ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಶ್ರೀ ಸಿದ್ದರಾಮನಗೌಡ ಸಣ್ಣರಾಮಣಗೌಡ ಪಾಟೀಲ ಅವರಿಂದ ಆರಂಭವಾಯಿತು. ಇಂದು ಸಹಕಾರಿ ಬ್ಯಾಂಕ್‌ಗಳು ದೇಶದ ತುಂಬೆಲ್ಲ ರೈತರಿಗೆ ಸಣ್ಣ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ಸಾಲಗಳನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಪೂರೈಸುತ್ತವೆ. ಗ್ರಾಮೀಣಾಭಿವೃದ್ಧಿಯಲ್ಲಿ ರೈತರಿಗೆ ಸಾಲ ಪೂರೈಸುವಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳು, ತಾಲೂಕು ಮಟ್ಟದ ಸಹಕಾರಿ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಮಟ್ಟದ ಸಹಕಾರಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಬ್ಯಾಂಕ್ ಸಿಬ್ಬಂದಿ ಹೀನಾ ಕೌಸರ್ ಅವರು ಬ್ಯಾಂಕ್‌ನಲ್ಲಿ ಸಾರ್ವಜನಿಕರು ಹೇಗೆ ಠೇವಣಿ ಮಾಡುತ್ತಾರೆ ಹಾಗೂ ಯಾವ್ಯಾವ ಪ್ರಕಾರದ ಠೇವಣಿಗಳು ಇರುತ್ತವೆ. ಅದಕ್ಕೆ ಎಷ್ಟು ಬಡ್ಡಿದರ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಇರುವ ಸಂಬಂಧವನ್ನು ತಿಳಿಸಿಕೊಟ್ಟರು.
ಬ್ಯಾಂಕ್ ವ್ಯವಸ್ಥಾಪಕಿ ಎಸ್.ಬಿ. ಕೂಗು ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು.
ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಚ್. ಜಂಗಣವಾರಿ, ಉಪನ್ಯಾಸಕ ಕೋಟೆಪ್ಪ ಗುಂಡಿಕೇರಿ, ಬ್ಯಾಂಕಿನ ಸಿಬ್ಬಂದಿ ಕೆ.ಬಿ. ದೊಡ್ಡಮನಿ, ಎಂ.ಎಸ್. ಸುರಕೋಡ, ಎಚ್.ಎ. ಅಳವಂಡಿ, ಎಂ.ಜೆ. ನಮಾಜಿ, ರಮ್ಯಾ ಎಸ್.ಎಂ, ಎನ್.ಎಸ್. ಚೌಹಾಣ್, ಎಸ್.ಆರ್. ಕೊಪ್ಪಳ ಮತ್ತಿತರರು ಇದ್ದರು.