

ಗುಂಡ್ಲುಪೇಟೆ: ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಕರೆ ನೀಡಿದ್ದ ಮುಷ್ಕರ ತಾಲೂಕಿನಲ್ಲಿ ಅಂತಹ ಪರಿಣಾಮ ಬೀರದಿದ್ದರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಮಂಗಳವಾರ ಬೆಳಗ್ಗೆ 9 ಗಂಟೆವರೆಗೂ ಎಲ್ಲ ಬಸ್‌ಗಳು ಎಂದಿನಂತೆ ಸಂಚರಿಸಿದವಾದರೂ ನಂತರ ಮುಷ್ಕರ ಆರಂಭವಾದ್ದರಿಂದ ಬಸ್‌ಗಳ ಸಂಖ್ಯೆ ಕಡಿಮೆಯಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ತಂಗಿದ್ದ ಬಸ್‌ಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಜನರು ತಾವು ಹೋಗಬೇಕಾದ ಕಡೆಗೆ ಸಾಕಷ್ಟು ಬಸ್‌ಗಳಿಲ್ಲದೆ ಪರದಾಡಿದರು. ಇದರಿಂದ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿತ್ತು. ಮುಷ್ಕರದ ಬಗ್ಗೆ ಅರಿವಿಲ್ಲದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸ್ವಲ್ಪಮಟ್ಟಿಗೆ ತೊಂದರೆ ಎದುರಿಸಿದರು. ಮೈಸೂರು, ನಂಜನಗೂಡು ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಸಿಕ್ಕ ಸಿಕ್ಕ ಆಟೋ, ಟೆಂಪೋ ಹತ್ತಿ ಪ್ರಯಾಣಿಸಿದರು. ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಜನರು ಬಸ್‌ಗಳಿಲ್ಲದೆ ನಿಲ್ದಾಣದಲ್ಲಿ ಕಾದು ಕುಳಿತಿದ್ದ ದೃಶ್ಯ ಕಂಡು ಬಂತು.
ಈ ನಡುವೆ ಸಾರಿಗೆ ಬಸ್ ನಿಲ್ದಾಣದ ಎದುರು ಸಾಲುಗಟ್ಟಿ ನಿಂತ ಖಾಸಗಿ ಬಸ್ ಸಾರಿಗೆ ಬಸ್ ದರವನ್ನೇ ಪಡೆದು ಮೈಸೂರು, ನಂಜನಗೂಡು ಹಾಗೂ ಚಾಮರಾಜನಗರಕ್ಕೆ ಹೋಗುವ ಪ್ರಯಾಣಿಕರನ್ನು ಕರೆದೊಯಿತು. ಇಷ್ಟು ದಿನ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುತ್ತಿದ್ದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಟಿಕೆಟ್ ದರ ಎಷ್ಟು ಎಂದು ಪ್ರಶ್ನಿಸಿ ನಂತರ ಬಸ್ ಹತ್ತುತ್ತಿದ್ದರು. ಆಟೋ, ಟೆಂಪೋ ಹಾಗೂ ಖಾಸಗಿ ಬಸ್‌ನವರು ನಿಗದಿತ ಟಿಕೆಟ್ ದರಕ್ಕಿಂತ ಕಡಿಮೆ ಹಣಕೊಟ್ಟರೂ ಪ್ರಯಾಣಿಕರನ್ನು ಕರೆಯೊಯ್ಯುವ ಮೂಲಕ ಉದಾರತೆ ಮೆರೆದರು.
ಮಧ್ಯಾಹ್ನದ ವೇಳೆಗೆ ಅಲ್ಲೊಂದು ಇಲ್ಲೊಂದು ಸಾರಿಗೆ ಬಸ್‌ಗಳು ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ.