

ಬಾಳೆಹೊನ್ನೂರು: ವಿದ್ಯಾರ್ಥಿಗಳು ಜೀವನದಲ್ಲಿ ದೊರೆಯುವ ಸಮಯ ಮತ್ತು ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.
ರಂಭಾಪುರಿ ಪೀಠದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಳೆಹೊನ್ನೂರು ಕ್ಲಸ್ಟರ್ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದರು.
ಯಾವ ವಿದ್ಯಾರ್ಥಿಗೂ ಪ್ರತಿಭೆ ಹೊಸದಾಗಿ ಬಂದಿರುವುದಿಲ್ಲ, ಅದು ಹುಟ್ಟಿನಿಂದಲೇ ಇರುತ್ತದೆ. ಅದನ್ನು ಹೊರತರುವ ಉದ್ದೇಶದಿಂದಲೇ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಮನರಂಜನೆ, ಸ್ಪರ್ಧೆಗಾಗಿ ಮಾತ್ರವಾಗಿದ್ದು ಸೋಲು-ಗೆಲುವು ಮುಖ್ಯವಲ್ಲ. ಗೆದ್ದವರು ಬೀಗದೆ, ಸೋತವರು ಕುಗ್ಗದೆ ಮುನ್ನಡೆಯಬೇಕು ಎಂದು ಹೇಳಿದರು.
ಮಾದನಹಿಪ್ಪರಗಿಯ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಉನ್ನತ ಸ್ಥಾನಮಾನ ಅಲಂಕರಿಸುವ ವ್ಯಕ್ತಿತ್ವ ವಿದ್ಯಾರ್ಥಿಗಳಲ್ಲಿ ಅಡಗಿದೆ. ಸತ್ಪ್ರಜೆಗಳನ್ನು ರೂಪಿಸುವ ಉದ್ದೇಶದಿಂದಲೇ ಸರ್ಕಾರ ಪ್ರತಿಭಾ ಕಾರಂಜಿ ಆಯೋಜಿಸಿದೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಮಾತನಾಡಿ, ಪಠ್ಯೇತರ ಚಟುವಟಿಕೆಯೂ ವಿದ್ಯಾರ್ಥಿಗಳಿಗೆ ಮುಖ್ಯ. ಅಂಕ ಗಳಿಕೆಯೇ ಮುಖ್ಯವಲ್ಲ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಇಬ್ರಾಹಿಂ ಶಾಫಿ, ಜಗದೀಶ್ಚಂದ್ರ, ಸಿಆರ್‌ಪಿ ಸತೀಶ್, ಮಾಲತೇಶ್, ಇಸಿಒ ರಂಗಪ್ಪ, ವಿಜಯಕುಮಾರ್, ರಂಭಾಪುರಿ ಪೀಠದ ಲೆಕ್ಕಾಧಿಕಾರಿ ಸಂಕಪ್ಪ, ಪ್ರಮುಖರಾದ ಮಹಾದೇವಿ, ಸುಜಾತಾ ಅಳವಂಡಿ, ಯಶೋದಾ, ವೀರೇಶ ಕುಲಕರ್ಣಿ, ಕಟ್ಟೇಗೌಡ, ಆಶಾ, ನಟರಾಜ್, ಗಿರಿಜಾ ಇತರರಿದ್ದರು.