ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು

3
Published on

ಮೈಸೂರು: ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಕರೆ ನೀಡಿದರು.

ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಅಣ್ಣಯ್ಯಪ್ಪ ಸ್ಮಾರಕ ವಿದ್ಯಾ ಸಂಸ್ಥೆಯ ಶ್ರೀ ಭೈರವೇಶ್ವರ ಶಾಲೆ ಮತ್ತು ಎಎಂಬಿ ಸಂಯುಕ್ತ ಪಿಯು ಕಾಲೇಜಿನ ರಜತ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೇಶಿಯ ಸಂಸ್ಕೃತಿಯನ್ನು ಕಲಿತು ಪಾಲನೆ ಮಾಡಬೇಕಿದೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.

ಗಾಯಕ ಹರ್ಷ ಮಾತನಾಡಿದರು. ಜತೆಗೆ ತಮ್ಮ ಗಾಯನದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಗಾಯನದ ಮೂಲಕವೇ ನೀತಿ ಪಾಠ ಹೇಳಿದ್ದು, ವಿಶೇಷವಾಗಿತ್ತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ವಿದ್ಯಾ ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಸುಬ್ಬೇಗೌಡ, ಅಧ್ಯಕ್ಷ ಡಾ.ಎಸ್.ಜಗದೀಶ್, ಕಾಂಗ್ರೆಸ್ ಮುಖಂಡ ಡಾ.ಸುಶ್ರುತ್, ಮಾಜಿ ಶಾಸಕ ಎಲ್. ನಾಗೇಂದ್ರ, ಪಾಲಿಕೆ ಮಾಜಿ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್, ಶಿವಣ್ಣ, ಪ್ರಾಂಶುಪಾಲರಾದ ಎಸ್.ಸೌಮ್ಯ, ಆಡಳಿತಾಕಾರಿ ಬಿ.ಆರ್.ಪಂಚಾಕ್ಷರಿ, ಮುಖ್ಯ ಶಿಕ್ಷಕಿ ಕಾಮಾಕ್ಷಿ, ದೊರೆ ಸ್ವಾಮಿ, ದೇವೇಗೌಡ, ಅಪ್ಪಾಜಿ ಗೌಡ, ಬೋರಲಿಂಗೇಗೌಡ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net