

ಮೈಸೂರು: ವಿದ್ಯಾರ್ಥಿಗಳು ಶ್ರದ್ಧೆಯಿಂದ ಗುರಿ ಇಟ್ಟುಕೊಂಡು ಸಾಧನೆ ಮಾಡುವುದರೊಂದಿಗೆ ತಂದೆ, ತಾಯಿಯಂದಿರ ಇಚ್ಛೆ ಅರಿತು ನಡೆಯಬೇಕು ಎಂದು ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಸಲಹೆ ನೀಡಿದರು.
ಕುವೆಂಪು ನಗರದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಮೈಸೂರು ಜಿಲ್ಲೆಗೆ ಹೊಸದಾಗಿ 14 ಬಿಸಿಎಂ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಈ ಹಾಸ್ಟೆಲ್‌ನ ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಬೇಕು. ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾಗಿ ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಬೇಕು. ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ಆಗ ಮಾತ್ರ ನಿಮ್ಮ ಜ್ಞಾನ ವೃದ್ಧಿಯಾಗಿ ನೀವು ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ವಿಸ್ತರಣಾಧಿಕಾರಿ ಸುಜೇಂದ್ರಕುಮಾರ್ ನಿಲಯ ಪಾಲಕರಾದ ಜಗದೀಶ್‌ಕೋರಿ, ಗೋಪಾಲ್, ಅರ್ಪಿತ್, ಅಯಾತ್, ಪ್ರಸನ್ನ ಇದ್ದರು.