ಪದವಿ ಜತೆಗೆ ಕೌಶಲ ಶಿಕ್ಷಣವನ್ನು ಕಲಿಯಬೇಕು; ವಿದ್ಯಾರ್ಥಿಗಳಿಗೆ ಡಾ. ಎಸ್.ವಿದ್ಯಾಶಂಕರ್ ಕರೆ

bgs
Published on

ಬೆಂಗಳೂರು: ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಸೇರಿ ಪದವಿ ಪಡೆದರೆ ಸಾಲದು, ಜೊತೆಗೆ ಅಗತ್ಯ ಕೌಶಲ ಶಿಕ್ಷಣವನ್ನು ಕಡ್ಡಾಯವಾಗಿ ಕಲಿತುಕೊಳ್ಳಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದ್ದಾರೆ.

ಎಸ್.ಜೆ.ಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವುದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಿವೆ. ಖಾಸಗಿ ಕಂಪನಿಗಳು ಉದ್ಯೋಗವಿಟ್ಟುಕೊಂಡು ಬರುತ್ತಿವೆ. ಆದರೆ ಸಮರ್ಥ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ಕೌಶಲದ ಕೊರತೆ. ಇದಕ್ಕಾಗಿ ಕೌಶಲ ಸಾಮರ್ಥ್ಯವನ್ನು ಪರಿಶೀಲಿಸುವ ತಂತ್ರಜ್ಞಾನವನ್ನು ನಾವು ರೂಪಿಸಿದ್ದೇವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಟಾಟಾ ಎಲಾಕ್ಸಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ನವೀನ್ ಮಂಜುನಾಥ, ಶ್ರೀ ಧನಂಜಯ ಗುರೂಜಿ, ಡಾ. ಕಿರಣ್ ರಾಜಣ್ಣ, ಪ್ರಾಂಶುಪಾಲ ಡಾ.ಕೆ.ವಿ.ಮಹೇಂದ್ರ ಪ್ರಶಾಂತ್. ಶೈಕ್ಷಣಿಕ ನಿರ್ದೇಶಕ ಡಾ. ಪುಟ್ಟರಾಜು ಇತರರು ಇದ್ದರು.

"ಪ್ರತಿಯೊಬ್ಬರು ಹಣದ ಹಿಂದೆ ಓಡುತ್ತಿರುವುದು ದುರಂತ. ಎಸ್‌ಜೆಬಿ ಕಾಲೇಜಿನಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಇಂದು ಈ ವಿದ್ಯಾರ್ಥಿಗಳ ಸಂಖ್ಯೆ ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅವರ ಕನಸನ್ನು ನಾವು ನನಸು ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿಯನ್ನು ಸಹ ಕಲಿಸುತ್ತಿದ್ದೇವೆ." -ಡಾ. ಪ್ರಕಾಶನಾಥ ಸ್ವಾಮೀಜಿ , ವ್ಯವಸ್ಥಾಪಕ ನಿರ್ದೆಶಕರು, ಎಸ್‌ಜೆಬಿ ಸಮೂಹ ಸಂಸ್ಥೆಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net