

ಬೆಂಗಳೂರು: ಉನ್ನತಶಿಕ್ಷಣ ಪಡೆಯುವ ವೇಳೆ ವಿದ್ಯಾರ್ಥಿಗಳು ಸೌಹಾರ್ದಯುತ ಕಲಿಕೆ, ಪರಸ್ಪರ ಬಾಂಧವ್ಯ ಹಾಗೂ ಗುರಿ ಕೇಂದ್ರಿತ ಅಧ್ಯಯನವನ್ನು ಕೈಗೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ 2023-2024ನೇ ಸಾಲಿನ ಮೊದಲನೇ ವರ್ಷದ ಬಿ.ಇ ತರಗತಿಗಳ ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಲೇಜು ಹಂತದಲ್ಲಿ ಜ್ಞಾನಾರ್ಜನೆ ಮಾಡುವಾಗ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಪದವಿ ಪಡೆಯುವಾಗಲೇ ತಮ್ಮ ಇಷ್ಟ ವಿಷಯಗಳಲ್ಲಿ ಕೌಶಲ ಪಡೆಯಬೇಕು. ಇದರಿಂದ ಪದವೀಧರರ ವಿದ್ಯಾಸಂಸ್ಥೆಯಿಂದ ಹೊರಬರುವಾಗ ವೃತ್ತಿಪರತೆಯನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ ಎಂದು ಅವರು ತಿಳಿಸಿದರು.
ಪಿವಿಪಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಹಿರಿಯ ಟ್ರಸ್ಟಿ ಎಸ್.ಶಿವಮಲ್ಲು ಮಾತನಾಡಿ, ಇಂದಿನ ತಾಂತ್ರಿಕ ಉದ್ಯೋಗಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಅದಕ್ಕೆ ಪೂರಕವಾದ ಜ್ಞಾನವನ್ನು ಗಳಿಸಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹಾಗೂ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿವಿಪಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಬಿ.ಎನ್.ಉಮೇಶ್, ಸಂಶೋಧನಾ ಸಲಹೆಗಾರ ಪ್ರೊ. ಎಲ್.ಎಂ.ಪಟ್ನಾಯಕ್, ಪ್ರಾಂಶುಪಾಲ ಡಾ. ಎಂ.ಮೀನಾಕ್ಷಿ, ಉಪಪ್ರಾಂಶುಪಾಲ ಡಾ. ಎಂ.ವಿ. ವಿಜಯ್ಕುಮಾರ್ ಹಾಗೂ ಮತ್ತಿತರರಿದ್ದರು.
ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜತೆಗೆ ಎಎಚ್‌ಎ (ನಡವಳಿಕೆ, ಆರೋಗ್ಯ, ಅಕಾಡೆಮಿಕ್ ) ಮಾದರಿಯನ್ನು ಬೆಳೆಸಿಕೊಂಡು ಉತ್ತಮ ಮಟ್ಟದ ಪ್ರಜೆಯಾಗಲು ಸಾಧ್ಯವಿದೆ. ಇದರತ್ತ ಸದಾ ಗಮನ ಹರಿಸಿದ್ದಲ್ಲಿ ಶೈಕ್ಷಣಿಕವಾಗಿ ಮುಂದೆ ಬರಬರಲು ಅವಕಾಶ ಸಿಗಲಿದೆ.
- ಡಾ. ದೇಬಬ್ರತಾ ದಾಸ್, ಐಐಐಟಿ-ಬೆಂಗಳೂರು ನಿರ್ದೇಶಕ