ವಿದ್ಯಾರ್ಥಿಗಳು ಓದಿಗೆ ಹೆಚ್ಚು ಆದ್ಯತೆ ನೀಡಲಿ

14 HANUR 2
ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಮಹದೇವಪ್ಪ ಸ್ಮರಣಾರ್ಥ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು. ಪ್ರೇಮಾಲೀಲಾ, ಡಾ, ಮಂಜುಳಾ, ರಾಣಿ. ಉಮಾ, ಮಹೇಶ್ ಇದ್ದರು.
Published on

ಹನೂರು: ಪ್ರತಿಯೊಬ್ಬರೂ ಓದಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಪಾಲಕರು ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಮಾಗಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಮಂಜುಳಾ ತಿಳಿಸಿದರು.

ತಾಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ದಿವಂಗತ ಎನ್.ಮಹದೇವಪ್ಪ ಅವರ ಸ್ಮರಣಾರ್ಥ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂದೆ ದಿ.ಮಹದೇವಪ್ಪ ಅವರು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಶಾಲಾ ಅವಧಿಯಲ್ಲೇ ಸಾಧನೆ ಮಾಡಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಮಕ್ಕಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುರಸ್ಕರಿಸುತ್ತಿದ್ದರು. ಆದರೆ ನಿಧನರಾದ ಬಳಿಕ ಈ ಕಾರ್ಯವನ್ನು ಮಂಗಲ ಶಾಲೆಯಲ್ಲಿ ಮುಂದುವರಿಸುತ್ತಿದ್ದು, ಇತರರಿಗೆ ಪ್ರೇರಣೆಯಾಗಬೇಕಿದೆ ಎಂದರು.

ಇಂತಹ ಕಾರ್ಯಗಳು ಹೆಚ್ಚಾಗುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ. ಶೈಕ್ಷಣಿಕ ಪ್ರಗತಿಗೆ ಸ್ಫೂರ್ತಿದಾಯಕವಾಗುತ್ತದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು. ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಪರಿಶ್ರಮ ಪಟ್ಟು ಆಯಾ ದಿನದ ಪಾಠವನ್ನು ಅಂದೇ ಅಭ್ಯಸಿಸಬೇಕು. ಮೊಬೈಲ್ ಬಳಕೆಯನ್ನು ಶಿಕ್ಷಣಕ್ಕೆ ಪೂರಕವಾದ ಮಾಹಿತಿಗಾಗಿ ಮಾತ್ರ ಉಪಯೋಗಿಸಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆಗೈಯಲು ಸಾಧ್ಯ. ಈ ಮೂಲಕ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಮಹೇಶ್ ಮಾತನಾಡಿ, ದಿ.ಎನ್.ಮಹದೇವಪ್ಪ ಸ್ಮರಣಾರ್ಥ ಕಳೆದ ವರ್ಷ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪುನರ್ಬಲನದ ಹಿತ ನುಡಿಯನ್ನು ತಿಳಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿತ್ತು. ಪಾಲಕರಿಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಸ್ಫೂರ್ತಿದಾಯಕವಾಗಿತ್ತು. ಹಾಗೆಯೇ ಶಿಕ್ಷಕರು ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ್ದರು. ಇದರ ಫಲವಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಶೇ.90ರಷ್ಟು ಫಲಿತಾಂಶವನ್ನು ಪಡೆಯುವುದರ ಮೂಲಕ ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಪೈಕಿ ನಮ್ಮ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಪ್ರೋತ್ಸಾಹವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕಿ ರಾಣಿ ಮಾತನಾಡಿ, ದಿ.ಮಹದೇವಪ್ಪ ಅವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇದರ ಫಲ ಇವರ ಮಕ್ಕಳು ಉನ್ನತ ಹುದ್ದೆಯನ್ನು ಪಡೆದಿರುವುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲಿ ಎನ್ನುವ ಉದ್ಧೇಶದಿಂದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು. ಇದಕ್ಕೂ ಮುನ್ನ ಸ್ಮರಣಾರ್ಥದ ಸಂಕೇತವಾಗಿ ಶಾಲಾವರಣದಲ್ಲಿ ಸಸಿ ನೆಡಲಾಯಿತು. ದಿ. ಮಹದೇವಪ್ಪ ಪತ್ನಿ ಪ್ರೇಮಾಲೀಲಾ, ಗ್ರಾಪಂ ಅಧ್ಯಕ್ಷೆ ಉಮಾ, ಶಿಕ್ಷಕರಾದ ಶಂಭಯ್ಯ, ಪ್ರಭುರಾಜು, ಸೂರ್ಯಕಾಂತ್, ಪುಟ್ಟಸ್ವಾಮಿ, ಸತೀಶ್, ಮುಖಂಡರಾದ ಮರಿಸ್ವಾಮಿ, ಮುದ್ದುಮಾದಪ್ಪ, ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net