ವಿದ್ಯಾರ್ಥಿಗಳು ಅಭ್ಯಾಸಕ್ಕೆ ಆದ್ಯತೆ ನೀಡಲಿ

Students should prioritize practice.
ವಿಜಯಪುರದ ರವೀಂದ್ರನಾಥ ಠಾಗೋರ ಪಿಯು ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಿವಾಜಿ ಗಾಯಕವಾಡ, ಸಿ.ಕೆ. ಹೊಸಮನಿ, ಮಹೇಶ ಶೆಟಗಾರ ಮತ್ತಿತರರಿದ್ದಾರೆ.
Published on

ವಿಜಯಪುರ: ದ್ವಿತೀಯ ಪಿಯು ಹಂತ ವಿದ್ಯಾರ್ಥಿಗಳ ವೃತ್ತಿ ಜೀವನ ನಿರ್ಧರಿಸುವ ಕಾಲವಾಗಿದ್ದು, ಸಮಯ ವ್ಯರ್ಥ ಮಾಡದೆ ಅಭ್ಯಾಸದತ್ತ ಗಮನ ಹರಿಸಬೇಕು ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ ಸಲಹೆ ನೀಡಿದರು.

ನಗರದ ಹೇರಲಗಿ ಲೇಔಟ್‌ನಲ್ಲಿರುವ ರವೀಂದ್ರನಾಥ ಠಾಗೋರ ಪಿಯು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗದೆ ಕೇವಲ ಜ್ಞಾನಾರ್ಜನೆ ದೃಷ್ಟಿಯಿಂದ ಮೊಬೈಲ್ ಬಳಸಿ ತಮ್ಮ ಮುಂದಿನ ಗುರಿ ಸಾಧಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದರು.

ಸದ್ಯ ಸಾಮಾಜಿಕ ಜಾಲತಾಣ ವಿದ್ಯಾರ್ಥಿಗಳಿಗೆ ಬಹಳಷ್ಟು ಹಾನಿಯುಂಟು ಮಾಡುತ್ತಿದೆ. ಮೊಬೈಲ್ ಇಲ್ಲದೆ ಹೋದರೆ ಮಾನಸಿಕವಾಗಿ ಕುಗ್ಗಿಹೋಗುವ ಮನಸ್ಥಿತಿ ಅವರದ್ದಾಗಿದೆ. ಮೊಬೈಲ್ ಬಳಕೆಯ ಸದುಪಯೋಗಕ್ಕಿಂತ ದುರುಪಯೋಗವೇ ಅಧಿಕವಾಗುತ್ತಿದೆ. ನಿಮಗೆ ಲಭಿಸಿದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡದೆ ಜೀವನದಲ್ಲಿ ಗುರಿಯತ್ತ ಮುನ್ನುಗಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಮಹೇಶ ಶೆಟಗಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶಕ್ಕೆ ರಾಷ್ಟ್ರಗೀತೆ ನೀಡಿದ ಮಹಾನ್ ಪುರುಷ ರವೀಂದ್ರನಾಥ ಠಾಗೋರ ಹೆಸರಿನ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರಂತೆ ಸಾಧನೆ ಮಾಡಬೇಕು ಎಂದರು.

ಇತ್ತೀಚೆಗೆ ವಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮಹೇಶ ಶೆಟಗಾರ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆ ಹಾಗೂ ವೀರ ಶಿವಾಜಿ ಡಿಫೆನ್ಸ್ ಅಕಾಡೆಮಿ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ, ಪ್ರಾಚಾರ್ಯ ಶ್ರೀನಿವಾಸ ಪುಕಾಳೆ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರೀತಾ ಗಾಯಕವಾಡ, ಮುಖ್ಯಶಿಕ್ಷಕ ಶಿವರಾಮ ಜಮ್ಮನಕಟ್ಟಿ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ ಇತರರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net