ವಿದ್ಯಾರ್ಥಿಗಳು ಸಂಸ್ಕಾರ ಮರೆಯಬಾರದು

ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿಯ ಹೊಳಲ್ಕೆರೆಯಲ್ಲಿ ನಿವೃತ್ತ ಶಿಕ್ಷಕ ಶಿವಯೋಗಿ ಅವರನ್ನು ಗೌರವಿಸಲಾಯಿತು. ಮೋಹನ್ ಕುಮಾರ್, ಸತೀಶ್,ಉಮೇಶ್, ಗೌಡಯ್ಯ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿಯ ಹೊಳಲ್ಕೆರೆಯಲ್ಲಿ ನಿವೃತ್ತ ಶಿಕ್ಷಕ ಶಿವಯೋಗಿ ಅವರನ್ನು ಗೌರವಿಸಲಾಯಿತು. ಮೋಹನ್ ಕುಮಾರ್, ಸತೀಶ್,ಉಮೇಶ್, ಗೌಡಯ್ಯ ಇತರರು ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ಶಾಲೆ, ಕಾಲೇಜು ದಿನಗಳಲ್ಲಿ ಶಿಕ್ಷಕರು ಕಲಿಸಿದ ಪಾಠ ಮತ್ತು ಮಾರ್ಗದರ್ಶನ ಪಡೆಯುವುದರೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನೂ ಮರೆಯಬಾರದು ಎಂದು ಹಾಸನ ಡಯಟ್ ಪ್ರಾಂಶುಪಾಲ ರಂಗನಾಥಸ್ವಾಮಿ ಹೇಳಿದರು.

ತಾಲೂಕಿನ ಕಣಕಟ್ಟೆ ಹೋಬಳಿ ಹೊಳಲ್ಕೆರೆ ಶ್ರೀರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸೇವಾ ವಯೋನಿವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಾಗುವುದು ಮುಖ್ಯವಲ್ಲ. ವಿದ್ಯಾರ್ಥಿಗಳಿಗೆ ಸದ್ಗುಣ, ಸಂಸ್ಕಾರ ಕಲಿಸಿ ಉತ್ತಮ ಪ್ರಜೆಗಳಾಗುವಂತೆ ಬೋಧನೆ ನೀಡುವವನೇ ನಿಜವಾದ ಶಿಕ್ಷಕ. ಸ್ವಾಮಿ ವಿವೇಕಾನಂದರ ನುಡಿಗಳಂತೆ ಸ್ವಂತ ಮಕ್ಕಳು ನಮಗೆ ಮುಪ್ಪಿನ ಕಾಲದಲ್ಲಿ ಅನ್ನ ಹಾಕುತ್ತಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ನಮ್ಮ ಇಲಾಖೆ ಮಾತ್ರ ಕೊನೇ ಉಸಿರಿರುವ ತನಕ ನಮಗೆ ಅನ್ನವನ್ನು ನೀಡುತ್ತದೆ. ಆ ಅನ್ನಕ್ಕೆ ಕುತ್ತುಬಾರದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು. ಆಗ ಮಾತ್ರ ಶಿಕ್ಷಕ ಎಂಬ ಹೆಸರು ಗಳಿಸಲಿಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕ ಕೆ.ಎಂ ಶಿವಯೋಗಿ ಅವರು ಇದುವರೆಗೂ ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಅವರು ಗ್ರಾಮೀಣ ಪ್ರದೇಶಗಳಲ್ಲಿಯೂ ಅತ್ಯುತ್ತಮ ಶಿಕ್ಷಕ ಎಂಬ ಹೆಸರು ಪಡೆದಿರುವುದು ಅವರ ಗುಣಮಟ್ಟದ ಶಿಕ್ಷಣಕ್ಕೆ ಉದಾಹರಣೆಯಾಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಕರಷ್ಟೇ ಅಲ್ಲದೆ ಗ್ರಾಮಸ್ಥರು ಸಹ ಆಗಮಿಸಿರುವುದನ್ನು ನೋಡಿದರೆ ಶಿವಯೋಗಿ ಅವರ ಅಭಿಮಾನ ದುಪ್ಪಟ್ಟು ಆಗಿದೆ ಎಂದರು.

ಶಿಕ್ಷಣ ಸಂಯೋಜಕ ಸತೀಶ್ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದದ್ದು. ತಂದೆ, ತಾಯಿಗಳು ಮಕ್ಕಳಿಗೆ ಜನ್ಮ ಕೊಡುವುದು ಒಂದೆಡೆಯಾದರೆ, ಮತ್ತೊಂದೆಡೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮುಖ್ಯವಾಗಿದೆ ಎಂದರು.

ಕೆ.ಎಂ.ಶಿವಯೋಗಿ ಬೊಮ್ಮಸಂದ್ರ ಸೇರಿದಂತೆ ವಿವಿಧೆಡೆ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ನಾನು ಇಂದು ಶಿಕ್ಷಕನಾಗಿ ಇಂತಹ ಒಂದು ವೇದಿಕೆಯಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ಶಿವಯೋಗಿ ಅವರು, ಬಡ ರೈತ ಕುಟುಂಬದಿಂದ ಬಂದ ನಾನು ಪಾಲಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿ ಬೇಲೂರು ತಾಲೂಕಿನಲ್ಲಿ ಅನೇಕ ವರ್ಷಗಳು ಸೇವೆ ಸಲ್ಲಿಸಿ ನಂತರ ನನ್ನ ಹುಟ್ಟೂರಾದ ಅರಸೀಕೆರೆ ತಾಲೂಕಿನಲ್ಲಿಯೂ ಸೇವೆ ಸಲ್ಲಿಸಿದ್ದೇನೆ. ಪಡುವನಹಳ್ಳಿ ಗೊಲ್ಲರಹಟ್ಟಿ ಶಾಲೆಯಿಂದ ನಿವೃತ್ತಿ ಹೊಂದುತ್ತಿರುವುದು ಸದಾ ಹಚ್ಚ ಹಸಿರಾಗಿರುವ ನೆನಪಾಗಿದೆ ಎಂದರು.

ಶಿಕ್ಷಣಾಧಿಕಾರಿಗಳಾದ ಮೋಹನ್ ಕುಮಾರ್, ಕಿರುತೆರೆ ನಟರಾದ ಹುಳಿಯಾರ್ ಗೌಡಯ್ಯ, ನಟ ಉಮೇಶ್, ಕಣಕಟ್ಟೆ ಹೋಬಳಿ ವ್ಯಾಪ್ತಿಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ನಿವೃತ್ತ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net