ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತ ಬೇಡ

9 - Copy
Published on

ಮೈಸೂರು: ವಿದ್ಯಾರ್ಥಿಗಳು ಪಠ್ಯ, ಓದು, ಅಂಕ ಗಳಿಕೆಗೆ ಸೀಮಿತವಾಗಬಾರದು. ತಮ್ಮೊಳಗಿನ ಕಲೆಯನ್ನು ಹೊರತರಲು ಪ್ರಯತ್ನಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜನಪರ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ಅಕ್ಷರ ಕಲಿಯದಿದ್ದರೂ ಕಲಾವಿದರಾಗಿದ್ದರು. ನೂರಾರು ವರ್ಷಗಳ ಹಿಂದೆಯೇ ಶಿಲ್ಪಕಲೆಯ ನೈಪುಣ್ಯತೆ ಸಾಧಿಸಿದ್ದರು. ವಿದ್ಯಾರ್ಥಿಗಳು ಅಂಕಕ್ಕೆ ಸೀಮಿತರಾದರೆ ನಮ್ಮೊಳಗಿನ ಕಲಾವಿದ ಸುಮ್ಮನಿರುವುದಿಲ್ಲ. ತನ್ನೊಳಗಿನ ಕಲೆಯನ್ನು ಹೊರತರುವಂತೆ ಒತ್ತಡ ತರುತ್ತಿರುತ್ತಾನೆ. ವೇದಿಕೆ ಸಿಕ್ಕಾಗ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಶಿಕ್ಷಣ ಪಠ್ಯಕ್ಕೆ ಸೀಮಿತವಾಗುತ್ತಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯ ಬದಲು ರ‌್ಯಾಂಕ್‌ಗೆ ಸೀಮಿತಗೊಳಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಪಠ್ಯದ ಆಚೆಗೂ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನಾಡಿನ ಪ್ರಗತಿ ಹಣ, ಸಂಪತ್ತನ್ನು ಮಾತ್ರ ಅವಲಂಬಿಸಿಲ್ಲ. ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಶ್ರೀಮಂತಿಕೆಯನ್ನು ಒಳಗೊಂಡಿರುತ್ತದೆ. ಕಲೆ, ಸಂಸ್ಕೃತಿಯಿಂದ ರಾರಾಜಿಸುವ ಸಮಾಜ ಆರೋಗ್ಯ ಪೂರ್ಣವಾಗಿರುತ್ತದೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎನ್ನಲಾಗುತ್ತಿದೆ. ಇದು

ಪುರುಷ ಪ್ರಧಾನ ಧೋರಣೆ ಆಗಿದೆ. ಮುಂದಿನ ದಿನಗಳಲ್ಲಿ ಪುರುಷನ ಜತೆ ಮಹಿಳೆ ಇದ್ದಾಳೆ ಎಂದಾಗಬೇಕು. ಅವಕಾಶ ಸಿಕ್ಕರೆ ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಕಲಾವಿದರನ್ನು ಪ್ರೋತ್ಸಾಹಿಸಲು ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮಾತನಾಡಿ, ಡಿಜೆ ಸಂಸ್ಕೃತಿ ಹೆಚ್ಚಾಗುತ್ತಿರುವುದರಿಂದ ಜಾನಪದ ಗಾಯನ, ನೃತ್ಯ ಪ್ರಕಾರಗಳಿಗೆ ಹಿನ್ನಡೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಲೆ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಬೇಕು ಎಂದರು. ಡಾ.ಮೈಸೂರು ಗುರುರಾಜ್ ಇತರರಿದ್ದರು.

ವಿದ್ಯಾರ್ಥಿಗಳ ಸಂಭ್ರಮ
ಜನಪರ ಉತ್ಸವದಿಂದ ಕಾಲೇಜಿನ ಆವರಣದಲ್ಲಿ ಹಬ್ಬದ ಸಂಭ್ರಮವನ್ನುಂಟು ಮಾಡಿತ್ತು. ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿನಿಯರು ಡೊಳ್ಳು, ತಮಟೆ ಸದ್ದಿಗೆ ಕುಣಿದು ಸಂಭ್ರಮಿಸಿದರು. ಬಳಿಕ ಜಾನಪದ ಕಾವ್ಯ ಗಾಯನ ಆಸ್ವಾದಿಸಿದರು.
ಮಲೆ ಮಹದೇಶ್ವರರ ಜೀವನ ವೃತ್ತಾಂತವನ್ನು ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ತಂಡದವರು ಸುಶ್ರಾವ್ಯವಾಗಿ ಹಾಡಿದರು. ಮಹದೇವಸ್ವಾಮಿ ಅವರ ಸ್ವರಕ್ಕೆ ವಿದ್ಯಾರ್ಥಿನಿಯರು ತಲೆದೂಗಿದರು. ಬಳಿಕ ಡಾ.ಮೈಸೂರು ಗುರುರಾಜ್ ತಂಡದವರು ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕಾವ್ಯ ಗಾಯನ ಪ್ರಸ್ತುಪಡಿಸಿದರು. ಬನ್ನೂರಿನ ದೊಡ್ಡರಾಚಪ್ಪ ಮತ್ತು ತಂಡ ತಂಬೂರಿ ಪದ, ನಂಜನಗೂಡು ತಾಲೂಕಿನ ಕೆ.ಎನ್.ಅಶ್ವಿನಿ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ತಲಕಾಡಿನ ಪುಟ್ಟಮಾದಮ್ಮ, ಮಾದಿಗಳ್ಳಿಯ ಚನ್ನಜಮ್ಮ ಮತ್ತು ತಂಡದವರು ಸೋಬಾನೆ ಪದಗಳನ್ನು ಹಾಡಿದರು. ಬನ್ನೂರಿನ ಕರಿಯಪ್ಪ ತಂಡದ ಪೂಜಾ ಕುಣಿತಕ್ಕೆ ನೆರೆದಿದ್ದ ವಿದ್ಯಾರ್ಥಿನಿಯರು ಕುಣಿದು ಸಂಭ್ರಮಿಸಿದರು. ಮಹಿಳಾ ಕಂಸಾಳೆ, ಚಿಟ್ಟೆ ಮೇಳ, ರಂಗ ಕುಣಿತ ವಿದ್ಯಾರ್ಥಿನಿಯರನ್ನು ರಂಜಿಸಿತು.

ಕಲಾತಂಡಗಳ ಮೆರವಣಿಗೆ
ಜನಪರ ಉತ್ಸವದ ಅಂಗವಾಗಿ ಹತ್ತಾರು ಕಲಾ ತಂಡಗಳೊಂದಿಗೆ ಕೆ.ಆರ್.ವೃತ್ತದಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಪಟ ಕುಣಿತ, ಕಂಸಾಳೆ, ರಂಗ ಕುಣಿತ, ಕೋಲಾಟ, ಪೂಜಾ ಕುಣಿತ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net