

ಮೈಸೂರು: ಬಂಡೆಯಂತೆ ಅಚಲವಾಗಿ ಕೂರಬೇಡಿ, ಗಡಿಯಾರದಂತೆ ಕೆಲಸ ಮಾಡಿ ಎಂದು ರಾಮಕೃಷ್ಣ ವಿದ್ಯಾಶಾಲೆಯ ಕರೆಸ್ಪಾಂಡೆಂಟ್ ಶ್ರೀ ಸ್ವಾಮಿ ಯುಕ್ತೇಶಾನಂದಜೀ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿಜಯ ವಿಠಲ ವಿದ್ಯಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳ ಕಡೆಗೆ ಮಾತ್ರ ಗಮನ ಹರಿಸದೆ ಇತರೆ ಕೋರ್ಸ್‌ಗಳ ಕಡೆಗೂ ಗಮನ ಹರಿಸಬೇಕು. ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಪ್ರಜ್ಞೆ ಹಾಗೂ ಜ್ಞಾನ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ. ಜ್ಞಾನ ಲಭಿಸಲು ಗುರು ಹಿರಿಯರಲ್ಲಿ ಹಾಗೂ ತಂದೆ ತಾಯಿಯರಲ್ಲಿ ವಿನಯವಂತರಾಗಿರಬೇಕು. ಸಾವಿರಾರು ದೂರದ ಪ್ರಯಾಣ ಮೊದಲ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದೊಡ್ಡ ಕನಸು ಇಟ್ಟಿಕೊಂಡಾಗ ಇಡುವ ಪ್ರತಿ ಹೆಜ್ಜೆಯೂ ಮುಖ್ಯವಾಗಿರುತ್ತದೆ. ದೊಡ್ಡ ಮರವಾಗಲು ಬೇರು ಹೇಗೆ ಮುಖ್ಯವೋ ಹಾಗೆ ಎಷ್ಟು ಮೇಲೆ ಏರಲು ಪ್ರಯತ್ನಿಸುತ್ತೇವೆಯೋ ಪ್ರಯತ್ನವೂ ಅಷ್ಟೇ ಮುಖ್ಯವಾಗಿರುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 26 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿಜಯ ವಿಠಲವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಮಾತನಾಡಿ, ಶ್ರದ್ಧೆ, ಆಸಕ್ತಿ, ನಿಷ್ಠೆ ಇದ್ದರೆ ಜೀವನದಲ್ಲಿ ಸಾಧನೆಯ ದಾರಿ ಸುಗಮವಾಗುತ್ತದೆ ಎಂದು ಹೇಳಿದರು.
ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲರಾದ ಎಸ್. ವೀಣಾ ಹಾಗೂ ಇತರರು ಇದ್ದರು.