

ಬೆಟ್ಟದಪುರ: ವಿದ್ಯಾಸಂಸ್ಥೆಗಳಿಗೆ ಅಲ್ಲಿನ ಗ್ರಂಥಾಲಯವೇ ನಿಜವಾದ ಆಭರಣವಾಗಿದ್ದು, ಇಂತಹ ವಿಶೇಷ ಸೌಲಭ್ಯವನ್ನು ಪ್ರತಿ ವಿದ್ಯಾರ್ಥಿ ಸದುಪಯೋಗ ಪಡಿಸಿಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಪಿರಿಯಾಪಟ್ಟಣ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಇಲ್ಲಿನ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ ಮುಖ್ಯವಾಗಿರುತ್ತದೆ. ಅನಿಕೇತನ ಪಿಯು ಕಾಲೇಜಿಗೆ 25,000 ರೂ. ಮೌಲ್ಯದ ಉತ್ತಮ ಗ್ರಂಥಗಳನ್ನು ನೀಡಿ ವಿದ್ಯಾರ್ಥಿಗಳ ಓದಿಗೆ ಅಮೂಲ್ಯ ಕೊಡಗೆ ನೀಡಿದ ನಿವೃತ್ತ ಪ್ರಾಂಶುಪಾಲ ಜಿ.ಟಿ.ನಾಗರಾಜು ಅವರ ಕಾರ್ಯ ಶ್ಲಾಘನೀಯ ಎಂದರು.
ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುವುದು ಸುಲಭದ ಕೆಲಸವಲ್ಲ. ಇಂತಹ ಸಾಹಸದ ಕೆಲಸಕ್ಕೆ ಕೈಹಾಕಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನಿಕೇತನ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಶ್ರಮ ಸಾರ್ಥಕ ಎಂದು ಹೇಳಿದರು.
ಅನಿಕೇತನ ಕಾಲೇಜಿನಲ್ಲಿ ವಿಶ್ವಜ್ಞಾನಿ ಅಂಬೇಡ್ಕರ್ ಗ್ರಂಥಾಲಯ ಉದ್ಘಾಟನೆಯಾಗಿರುವುದು ಶ್ರೇಷ್ಠ ಜ್ಞಾನವಂತರ ಸೃಷ್ಟಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ), ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗಶೆಟ್ಟಿ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ರಹಮತ್ ಜಾನ್ ಬಾಬು, ನಿವೃತ್ತ ಉಪನ್ಯಾಸಕ ಆರ್.ಎಸ್.ದೊಡ್ಡಣ್ಣ, ಮಾನವ ಟ್ರಸ್ಟ್ ಅನಿಕೇತನ ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಣ್ಣ, ಗ್ರಾಪಂ ಸದಸ್ಯ ಅಯ್ಯರ್ ಗಿರೀಶ್, ಚಿಕ್ಕನೇರಳೆ ಮಾಜಿ ಅಧ್ಯಕ್ಷ ಸಿ.ವಿ ವೆಂಕಟೇಶ್, ಜ್ಯೋತಿ ಕುಮಾರ್, ಪುಸ್ತಕದಾನಿ ಜಿ.ಟಿ ನಾಗರಾಜು, ಮುಖಂಡರಾದ ಅನಿತಾ ತೋಟಪ್ಪ ಶೆಟ್ಟಿ, ಸಣ್ಣಸ್ವಾಮಿಗೌಡ, ಕೊಣಸೂರು ಮೂರ್ತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎನ್.ಆಕಾಶ್, ಕಾರ್ಯದರ್ಶಿ ಅನುಪಮ, ಅಕ್ಷಯಕುಮಾರ್, ಡಿ.ಆರ್.ಮನೋಜ್ ಕುಮಾರ್, ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ, ಸದಸ್ಯೆ ಟಿ.ಆರ್.ಶಕುಂತಲಾ, ಉಪನ್ಯಾಸಕರಾದ ಸುನಿತಾ, ರಮ್ಯಾ, ರಜನಿ, ಲೋಕೇಶ್, ಅಭಿಜಿತ್, ಶಿವನಂಜು, ಮನು ಇದ್ದರು.