ವಿದ್ಯಾರ್ಥಿಗಳು ಅಂಬೇಡ್ಕರ್‌ರನ್ನು ಅನುಸರಿಸಲಿ: ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಡಾ.ಹ.ರಾ.ಮಹೇಶ್

5
Published on

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿದ್ಯಾರ್ಥಿಗಳು ರೋಲ್ ಮಾಡೆಲ್ ಆಗಿ ಇಟ್ಟಕೊಂಡು ದುಶ್ಚಟಗಳಿಂದ ದೂರವಿದ್ದು, ಜ್ಞಾನದ ಜತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಡಾ.ಹ.ರಾ.ಮಹೇಶ್ ಕಿವಿಮಾತು ಹೇಳಿದರು.

ಬೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ವಿಶ್ವಕ್ಕೆ ಜ್ಞಾನದ ಸಂಕೇತವಾಗಿದ್ದಾರೆ. ಅಂಬೇಡ್ಕರ್ ಅವರನ್ನು ಜಾತಿಯಿಂದ ನೋಡುವವರನ್ನು ಪರಿವರ್ತನೆ ಮಾಡಿ ಮಹಾರಾಷ್ಟ್ರದಲ್ಲಿ ಕುರುಬ ಸಮಾಜದ ಸಾಹು ಮಹಾರಾಜರು ದೇಶದಲ್ಲಿಯೇ ಪ್ರಥಮವಾಗಿ 1902ರಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ತಿಬ್ಬಯ್ಯ ಮಾತನಾಡಿ, ಮೊಬೈಲ್‌ನಿಂದ ದೂರವಿದ್ದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಿರಿ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎನ್. ಜನಾರ್ದನ್ ಮಾತನಾಡಿ, ಸರ್ಕಾರ ನಿಮಗೆ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದು. ನಿಮ್ಮ ತಂದೆ-ತಾಯಿಯ ಕಷ್ಟಗಳನ್ನು ಅರಿತು ಚೆನ್ನಾಗಿ ಓದಿ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. 5 ವರ್ಷ ಕಷ್ಟಪಟ್ಟು ಓದಿದರೆ 50 ವರ್ಷ ಸುಖವಾಗಿರಬಹುದು ಎಂದರು.

ನಿಲಯಪಾಲಕ ಚಿಕ್ಕೀರಯ್ಯ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 5 ಸಾವಿರ ರೂ. ನೀಡುವುದಾಗಿ ಇದೇ ವೇಳೆ ಘೋಷಿಸಿದರು.

ಹಾಸ್ಟೆಲ್‌ನ ರಾಮಚಂದ್ರ, ಮಾರುತಿ, ಪ್ರದೀಪ್, ಹರೀಶ್, ಸಂತೋಷ್, ಜಯಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net