

ಮಡಿಕೇರಿ: ಮೊಬೈಲ್ ಗೀಳಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಮಕ್ಕಳು ದೇಹಕ್ಕೆ ಉತ್ತಮವಾಗಿರುವ ಕ್ರೀಡಾಲೋಕದತ್ತ ಮನಸ್ಸು ಕೇಂದ್ರೀಕರಿಸುವಂತವಾಗಬೇಕು ಎಂದು ಭಾರತೀಯ ಮಹಿಳಾ ಹಾಕಿ ತಂಡದ ವ್ಯವಸ್ಥಾಪಕಿ, ಸಹಾಯಕ ಕೋಚ್ ಆಗಿರುವ ಕೊಡಗಿನ ಅಂಕಿತಾ ಸುರೇಶ್ ಅಭಿಪ್ರಾಯಪಟ್ಟರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬುಧವಾರ ರೋಟರಿ ಸದಸ್ಯರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಖೇಲೋ ಇಂಡಿಯಾ ಯೋಜನೆ ಭಾರತೀಯ ಕ್ರೀಡಾಪಟುಗಳ ಸರ್ವಾಂಗೀಣ ಸಾಧನೆಗೆ, ಕ್ರೀಡಾಪಟುಗಳ ಪ್ರತಿಭೆ ಬೆಳಕಿಗೆ ತರಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಬಹಳ ದೊಡ್ಡ ರೀತಿಯಲ್ಲಿ ಕ್ರೀಡೆಗೆ ಭವಿಷ್ಯವಿದೆ. ಹೀಗಾಗಿ ಪ್ರತಿಯೋರ್ವ ಪಾಲಕರು ತಮ್ಮ ಮಕ್ಕಳನ್ನು ಪಠ್ಯದೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.
ಕ್ರೀಡಾಪಟುಗಳಿಗೆ ಎಲ್ಲಾ ಉದ್ಯೋಗ ಶ್ರೇಣಿಗಳಲ್ಲಿಯೂ ಮೀಸಲಾತಿ ಸೌಲಭ್ಯವನ್ನು ಕೂಡ ಸರ್ಕಾರ ಘೋಷಿಸಿದ ಹಿನ್ನಲೆಯಲ್ಲಿ ಉದ್ಯೋಗದ ಭರವಸೆ ಕ್ರೀಡಾಪಟುಗಳಿಗೆ ದೊರಕಿದೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭಾರತ ವನಿತೆಯರ ಹಾಕಿ ತಂಡಕ್ಕೆ ಕರ್ನಾಟಕ ಮತ್ತು ಕೊಡಗಿನಿಂದ ಹೆಚ್ಚಿನ ಆಟಗಾರ್ತಿಯರು ಸೇರುವಂತಾಗಬೇಕು. ಎಲ್ಲಾ ರೀತಿಯ ಬೆಂಬಲ ದೊರಕುತ್ತಿರುವ ಈ ಕಾಲಘಟ್ಟದಲ್ಲಿ ಹಾಕಿ ತಂಡಕ್ಕೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಮಹಿಳಾ ಹಾಕಿ ಆಟಗಾರ್ತಿಯರು ಪರಿಶ್ರಮ ಪಡುವಂತೆಯೂ ಅಂಕಿತಾ ಮನವಿ ಮಾಡಿದರು.
ನನ್ನ ಅಮ್ಮನನ್ನು ನನ್ನ ಅಜ್ಜಿ ಕ್ರೀಡಾರಂಗಕ್ಕೆ ಸೇರಲು ಬಿಟ್ಟಿರಲಿಲ್ಲ. ಆದರೆ ನನ್ನ ಅಮ್ಮ ನನ್ನನ್ನು ಕ್ರೀಡಾಪಟುವನ್ನಾಗಿಸಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು. ವಿವಾಹದ ಬಳಿಕ ಪತಿ ಸುರೇಶ್, ಅತ್ತೆ ಮಾವ ಕೂಡ ನನಗೆ ಬೆಂಬಲವಾಗಿದ್ದರು. ಹೀಗಾಗಿಯೇ ನನ್ನ ಕ್ರೀಡಾಸಾಧನೆಯ ಹಾದಿ ಸುಲಭವಾಯಿತು ಎಂದೂ ಅಂಕಿತಾ ಸ್ಮರಿಸಿಕೊಂಡರು.
ಇತ್ತೀಚಿಗೆ ಮುಕ್ತಾಯಗೊಂಡ ಕಾಮನ್ ವೆಲ್ತ್ ನೆನಪುಗಳನ್ನು ಹಂಚಿಕೊಂಡ ಅಂಕಿತಾ ಸುರೇಶ್, ಭಾರತದ ಕ್ರೀಡಾಪಟುಗಳನ್ನು ವಿದೇಶದ ಕ್ರೀಡಾಪಟುಗಳು ಹೆಮ್ಮೆಯಿಂದ ನೋಡುವಂತಾಗಿದೆ. ಪ್ರತಿಯೊಂದು ಕ್ರೀಡಾವಿಭಾಗದಲ್ಲಿಯೂ ಭಾರತೀಯ ಕ್ರೀಡಾಪಟುಗಳ ಸಾಧನೆ ಉನ್ನತವಾಗಿದೆ. ಭಾರತದ ಕ್ರೀಡಾಪಟುಗಳ ಆತ್ಮಸ್ಥೆರ್ಯ ಹೆಚ್ಚುತ್ತಿದೆ. ನಾವೂ ಯಾರಿಗೂ ಕಡಮೆಯಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದೂ ಅಂಕಿತಾ ಸುರೇಶ್ ಅನುಭವ ಹಂಚಿಕೊಂಡರು.
ತಾನು ಸಸ್ಯಾಹಾರಿಯಾಗಿದ್ದು ಪೌಷ್ಟಿಕಾಂಶದ ಆಹಾರಕ್ಕೆ ಆದ್ಯತೆ ನೀಡುತ್ತಿದ್ದೇನೆ. ಹೀಗಾಗಿಯೇ ದಿನಪೂತಿ೯ ಲವಲವಿಕೆಯಿಂದಿರಲು ಸಾಧ್ಯವಾಗಿದೆ. ಮಾಂಸಾಹಾರಿಯಾದರು ಕೂಡ ಅಗತ್ಯಕ್ಕಿಂತ ಹೆಚ್ಚು ತಿನ್ನದೇ ಆಹಾರ ಸೇವನೆಯಲ್ಲಿ ಶಿಸ್ತು ಬೆಳೆಸಿಕೊಂಡದ್ದೇ ಆದಲ್ಲಿ ಖಂಡಿತಾ ಉತ್ತಮ ದೇಹದಾಡ್ಯತೆ, ಆರೋಗ್ಯ ಕಾಪಾಡಲು ಸಾಧ್ಯ. ಹಣ್ಣು, ತರಕಾರಿ ಹೆಚ್ಚು ಸೇವಿಸಬೇಕು ಎಂದು ಸಲಹೆ ನೀಡಿದರು.
ಕಾಮನ್ ವೆಲ್ತ್‌ನಲ್ಲಿ ಭಾರತ ವನಿತೆಯರ ಹಾಕಿ ತಂಡದ ಸಾಧನೆ ಹಿನ್ನಲೆಯಲ್ಲಿ ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪಲ್ಲವಿ ಪ್ರಸಾದ್, ಶಪಾಲಿ ರೈ, ಸುರೇಶ್ ಕುಶಾಲಪ್ಪ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಹಾಜರಿದ್ದರು.
ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಸ್ವಾತಂತ್ರ್ಯ ಅಮತೋತ್ಸವ ಸಂದರ್ಭದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.