

ಮಡಿಕೇರಿ: ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಕಿವಿಮಾತು ಹೇಳಿದರು.
ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾಲೇಜಿನ ೨೦೨೨-೨೩ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರುಣ ಪದವಿಪೂರ್ವ ಕಾಲೇಜು ಚೇರಂಬಾಣೆಯ ಪ್ರಾಂಶುಪಾಲ ಡಿ.ಎಸ್.ರಾಮಕೃ?್ಣ ಮಾತನಾಡಿ, ವಿದ್ಯಾರ್ಥಿ ನಾಯಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಜತೆಗೆ ಶಿಸ್ತು ಸಂಯಮವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಜೆ.ದಿವಾಕರ ಮಾತನಾಡಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳು ಮತ್ತು ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಘದ ಕಾರ್ಯದರ್ಶಿ ನಿಡ್ಯಮಲೆ ರವೀಂದ್ರ, ನಿರ್ದೇಶಕ ನಂಜುಂಡಪ್ಪ, ಮೊಟ್ಟನ ಜ್ಯೋತಿಶಂಕರ್ ಮತ್ತು ಶಿಕ್ಷಕಿ ಗೀತಾ ಭಾವೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಲಯದ ೬೩ ವರ್ಷಗಳ ಸಾಧನೆಯ ಹಿನ್ನೊಟವನ್ನು ಬಿಂಬಿಸುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.