

ಮೈಸೂರು: ಹದಿಹರೆಯದ ಶಾಲಾ ಮಕ್ಕಳಿಗೆ ಆರೋಗ್ಯದ ಅರಿವು ಬಹಳ ಮುಖ್ಯವಾಗಿದ್ದು ಶಾಲೆಗಳಲ್ಲಿ ಪ್ರತಿವರ್ಷ ನಿಯಮಿತವಾಗಿ ಅರಿವು ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಬೇಕು ಎಂದು ವರುಣ ಆಶ್ರಯ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು ತಾಲೂಕು ಸಿದ್ದರಾಮಹುಂಡಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಶಾಲಾ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ವೈದ್ಯಕೀಯ ಕಾಲೇಜು 100 ವರ್ಷ ಪೂರೈಸುತ್ತಿರುವುದು ಹೆಮ್ಮೆಯ ವಿಷಯ. 8, 9 ಮತ್ತು 10ನೇ ತರಗತಿಯ 13 ರಿಂದ 16ನೇ ವಯಸ್ಸಿನ ಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಿರುವುದು ಉತ್ತಮವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ಲೈಂಗಿಕತೆ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಗುಣಮಟ್ಟದ ಆಹಾರವನ್ನು ಸೇವಿಸಬೇಕು. ಚಟಗಳಿಗೆ ಬಲಿಯಾಗಬಾರದು. ಇಂತಹ ಅರಿವು ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸಹಕಾರ ನೀಡಲು ಪ್ರಯತ್ನಿಸುತ್ತೇನೆ. ಸಿದ್ದರಾಮಯ್ಯಹುಂಡಿ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿಕೊಡುವುದಾಗಿ ಭರವಸೆ ನೀಡಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕಿ ಡಾ.ದಾಕ್ಷಾಯಿಣಿ ಮಾತನಾಡಿ, ಸಂಸ್ಥೆಯಿಂದ ಪ್ರತಿವರ್ಷ ಅರಿವು ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರೌಢಶಾಲಾ ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸಿದರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ವೈದ್ಯರಾದ ಡಾ.ಎಚ್.ಎನ್.ದಿನೇಶ್, ಡಾ.ಎಚ್.ಪರಮೇಶ್ವರ, ಡಾ.ಮಾಲೇಗೌಡ, ಡಾ.ಯೋಗೀಶ್, ಪ್ರಾಂಶಪಾಲೆ ರಾಜಶ್ರೀ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಕೆ.ಎನ್.ವಿಜಯ್, ಶಿವಸ್ವಾಮಿ, ಪ್ರದೀಪ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ, ಬಿಆರ್‌ಸಿ ಮಹಾದೇವ, ಮುಖ್ಯಶಿಕ್ಷಕ ಮಾಯಾಂಗ, ಮುಖಂಡರಾದ ಕೆಂಪೀರಯ್ಯ, ಪುಟ್ಟಣ್ಣ, ಮಹೇಂದ್ರ, ಮಂಜುಳಾ ಮಂಜುನಾಥ್, ಬಸವರಾಜು, ಎಂ.ಟಿ.ರವಿಕುಮಾರ್, ಮಾರ್ಬಳ್ಳಿ ಕುಮಾರ್, ಸಿದ್ದರಾಮು ಇದ್ದರು.