ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಲಿ

25 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಒಂದು ದೇಶ ಅಭಿವೃದ್ಧಿ ಹೊಂದಿದ್ದರೆ ಅದಕ್ಕೆ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮಾಡಿರುವ ಪ್ರಗತಿಯೇ ಕಾರಣ. ಉತ್ತಮ ವಿಜ್ಞಾನ ಸಂಶೋಧನೆಗಳು ಕೈಗೊಳ್ಳಲು ಮೊದಲಿಗೆ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಮತ್ತು ವೈಜ್ಞಾನಿಕ ವಿಚಾರವಂತಿಕೆ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ.ಸಂಕನೂರ ಹೇಳಿದರು.

ನಗರದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಆಶ್ರಯದಲ್ಲಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿರುವ ವಿಜ್ಞಾನ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಿ ಭಾರತವು ಅತೀ ವೇಗವಾಗಿ ಮುಂದುವರಿದ ರಾಷ್ಟ್ರವಾಗಲು ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಸಂಶೋಧನೆಗಳ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಬರೀ ವಿಜ್ಞಾನ ಸಂಶೋಧನೆಗಳ ಪ್ರದರ್ಶನವಲ್ಲದೇ ನಮ್ಮ ಸಂಸ್ಕೃತಿ ಮತ್ತು ನಮ್ಮ ನಾಗರಿಕತೆಯಿಂದ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳು ಮತ್ತು ವಿಜ್ಞಾನ ಕ್ಷೇತ್ರಕ್ಕೆ ನಮ್ಮ ಪೂರ್ವಜರ ಕೊಡುಗೆಗೆಳ ಬಗ್ಗೆ ಕಲಾಕೃತಿಗಳ ಮೂಲಕ ತಿಳಿಸಲಾಗಿದೆ. ವಿಜ್ಞಾನ ಸಂಭ್ರಮವು ವಿದ್ಯಾರ್ಥಿಗಳ ವಿಜ್ಞಾನ ಸಂಶೋಧನೆಗೆ ಬುನಾದಿಯಾಗಲಿದೆ ಎಂದರು.

ಡಾ. ಯು.ಎಸ್​. ರಾಯಕರ ಮಾತನಾಡಿದರು. ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್​.ಎಲ್​.ತೇರದಾಳ, ಮಹೇಶ ವಿ.ಎಸ್​., ಡಾ.ಎಚ್​. ಎನ್​.ಸುರೇಶಕುಮಾರ, ವಿಜ್ಞಾನ ಕೇಂದ್ರದ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net