

ಮೈಸೂರು: ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿ ಎರಡೂ ನಮ್ಮಲ್ಲಿಯೇ ಇರುತ್ತದೆ. ಸಕಾರಾತ್ಮಕ ಚಿಂತನೆ ಎಂದರೆ ಒಳ್ಳೆಯ ಕೆಲಸ, ಪ್ರೀತಿ, ವಿಶ್ವಾಸ, ನಂಬಿಕೆ, ಒಳ್ಳೆಯತನ ಇವೆಲ್ಲವೂ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದು ಬ್ರಹ್ಮಕುಮಾರಿಸ್ ಸರಸ್ವತಿಪುರಂ ಕೇಂದ್ರದ ಬ್ರಹ್ಮಕುಮಾರಿ ಬಿ.ಕೆ. ಮಂಜುಳಾ ಹೇಳಿದರು.
ನಗರದ ಟಿಟಿಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಯುವ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಸಕಾರಾತ್ಮಕತೆಯ ಶಕ್ತಿ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನ ತೆಗೆದು ಹಾಕಲು ಪ್ರಯತ್ನಿಸಬೇಕು.ನಮ್ಮ ಒಳ್ಳೆಯ ಅಭ್ಯಾಸಗಳು, ಪ್ರೀತಿ, ವಿಶ್ವಾಸ, ಸಂತೋಷ, ನಂಬಿಕೆ ಮುಂದುವರಿಸಬೇಕು. ಯಾವುದಾದರು ಹೊಸ ವಿಷಯ ಅಥವಾ ಹೊಸದರ ಬಗ್ಗೆ ತಿಳಿಯುವ ಆಸಕ್ತಿ ಹೊಂದಬೇಕು ಎಂದರು.
ಪದವಿ ಕಾಲೇಜು ಪ್ರಾಂಶುಪಾಲ ಡಾ.ಬಿ.ವಿ.ಪ್ರಶಾಂತ್, ಹಿರಿಯ ಪ್ರಾಧ್ಯಾಪಕ ಪ್ರೊ.ಎನ್.ಎಂ. ರಾಮಚಂದ್ರಯ್ಯ, ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಟಿಟಿಎಲ್ ಕಾಲೇಜಿನ ಟ್ರಸ್ಟಿ ಗೀತಾ ರಾಮದಾಸ್, ವಾಣಿಜ್ಯಶಾಸ್ತ್ರದ ವಿಭಾಗದ ಅಧಿಕಾರಿ ಡಾ. ಆಶಾ, ಗ್ರಂಥಪಾಲಕಿ ಎಸ್.ಎಚ್. ರಮ್ಯಶ್ರೀ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಎಚ್.ಆರ್. ಗಿರೀಶ, ಉಪನ್ಯಾಸಕ ಕರುಣ್ ಶರ್ಮ, ಬ್ರಹ್ಮಕುಮಾರಿಸ್ ಸರಸ್ವತಿಪುರಂ ಕೇಂದ್ರದ ಬ್ರಹ್ಮಕುಮಾರಿ ಸುಮಿತ್ರಾ ಇದ್ದರು.