ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ: ಪ್ರೊ.ಸುರೇಶ

fmcc college
Published on

ಮಡಿಕೇರಿ: ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸುರೇಶ ಸಲಹೆ ನೀಡಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದ ಅವರು, ಇತ್ತೀಚೆಗೆ ಉದ್ಯೋಗದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಬಿ.ಅಯ್ಯಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ಪರ್ಧಾ ಮನೋಭಾವ ಕಡಿಮೆಯಾಗುತ್ತಿದ್ದು, ಅವಕಾಶಗಳು ಹೆಚ್ಚಿವೆ. ಅದನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಮನರಂಜನೆಬೇಕು ಆದರೆ ಹೆಚ್ಚಿನ ಗಮನ ಭವಿಷ್ಯದ ಬಗ್ಗೆ ಇರಬೇಕು. ಈ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೇಜರ್ ಬಿ.ರಾಘವ, ಯಶಸ್ಸನ್ನು ಸಾಧಿಸಲು ಶಿಸ್ತು ಮತ್ತು ಶ್ರಮವಿರಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿದವರು ಯಾವಾಗಲು ಯಶಸ್ಸನ್ನು ಗಳಿಸುತ್ತಾರೆ. ಶಿಕ್ಷಣ ಎಂಬುದು ವ್ಯಕ್ತಿ, ವ್ಯಕ್ತಿತ್ವ, ಸಮಾಜ ದೇಶವನ್ನು ಪರಿವರ್ತನೆ ಮಾಡುವ ಅಸ್ತ್ರವಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ, ದುಡಿದು ತಿನ್ನುವ ಅನ್ನ, ಭಕ್ತಿ ಪೂರ್ವಕ ಪ್ರಾರ್ಥನೆ ಮತ್ತು ಪ್ರಾಮಾಣಿಕವಾಗಿ ದುಡಿದ ಹಣ ಇವು ಒಂದಲ್ಲ ಒಂದು ದಿನ ಭವಿಷ್ಯಕ್ಕೆ ಆಧಾರ ಸ್ತಂಭಗಳಾಗುತ್ತವೆ. ಎಲ್ಲಿ ಹುಟ್ಟುತ್ತೀರಿ ಎಂಬುದು ಮುಖ್ಯ ಅಲ್ಲ, ಎಲ್ಲಿ ಮುಟ್ಟುತ್ತೀರಿ ಎಂಬುದು ಮುಖ್ಯ ಎಂದರು.

ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯಂತಿ ರೈ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ತಂದೆ-ತಾಯಿಯರ ಕನಸಿದೆ. ಸಾಧನೆಯ ಹಾದಿಯಲ್ಲಿ ಸಾಗಿ ಸಾಧಕರಾಗಿ ನಿಲ್ಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಐಕ್ಯೂಎಕ್ಯೂ ಸಂಚಾಲಕ ಪ್ರೊ.ಕೆ.ಪಿ.ನಾಗರಾಜ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹೇಂದ್ರ, ಅಲಿನ್ ಜೇಷ್ಮಾ, ಮೋನಿಶ್ ಎನ್‌ಸಿಸಿ ನಾಯಕ ಗುಣಶೇಖರ್, ಬಿ.ಬಿ.ಕೃತಿ, ಎನ್‌ಎಸ್‌ಎಸ್ ನಾಯಕರಾದ ಟಿ.ವಿ.ವರ್ಷ, ಎಂ.ಮನೋಜ್, ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ.ಶೈಲಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ. ಶ್ರೀಧರ ಹೆಗಡೆ ಸ್ವಾಗತಿಸಿದರೆ, ವಿದ್ಯಾರ್ಥಿ ವರ್ಷ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಕ್ರಿಯೇಟಿವ್ ಖಲೀಲ್, ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ ಕ್ರೀಡಾಪಟು, ಎನ್‌ಸಿಸಿ ಕೆಡೆಟ್, ಎನ್‌ಎಸ್‌ಎಸ್ ವಿದ್ಯರ್ಥಿಗಳು, ವಿಶ್ವವಿದ್ಯಾಲಯ ಮಟ್ಟದಲ್ಲಿ ರ‌್ಯಾಂಕ್‌ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net