

ನಂಜನಗೂಡು: ನಗರದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ತಪಸ್ವಿಗಳಿದ್ದಂತೆ. ಜ್ಞಾನವನ್ನು ಸಂಪಾದಿಸಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪಠ್ಯ ವಿಷಯಗಳ ಜತೆಯಲ್ಲಿ ಪಠ್ಯೇತರ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಕೃತಿ ಚಿಂತಕರು ಹಾಗೂ ಖ್ಯಾತ ಗಾಯಕರಾದ ಡಾ. ದೀಪಿಕಾ ಪಾಂಡುರಂಗಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯಲ್ಲ. ಮಹತ್ತರ ವಿಚಾರಗಳಾದ ಸಚ್ಚಾರಿತ್ರ್ಯ, ಉತ್ತಮ ವ್ಯಕ್ತಿತ್ವ , ಜಾಣ್ಮೆ , ನೈಪುಣ್ಯತೆ, ಕೌಶಲ, ಬುದ್ಧಿವಂತಿಕೆ ಈ ಎಲ್ಲದರ ಸಂಗಮವಾಗಿದೆ. ಸಾಮರಸ್ಯದ ಬದುಕಿಗೆ ನಮ್ಮ ಸಂಸ್ಕೃತಿ ತಳಪಾಯ. ನಮ್ಮ ಸಂಸ್ಕೃತಿಯಂತೆ ಆಚಾರ , ವಿಚಾರಗಳನ್ನು ರೂಢಿಸಿಕೊಂಡು, ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಆರ್.ಗೋವರ್ಧನ್, ದೇಶ ಕಟ್ಟುವಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದ ಮಕ್ಕಳೇ ಹೆಚ್ಚಾಗಿರುವ ಈ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಹೆಮ್ಮೆ ತರುವ ವಿಚಾರ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿದ್ದ ರಂಜಿತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಕಾರ್ಯಕ್ಷಮತೆ ಹೆಚ್ಚಾಗಲು ಕ್ರೀಡೆ ಸಹಕಾರಿ. ಕ್ರೀಡೆಯು ಚೇತೋಹಾರಿಯಾಗಿ, ಉತ್ಸಾಹದಿಂದ ಇರಲು ಸಹಕಾರಿ. ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶಿವಕುಮಾರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೆಗೌಡ, ಸಂಚಾಲಕರಾದ ಶ್ರೀ ಗೂಳಪ್ಪಸ್ವಾಮಿ, ವಿಕ್ರಂ ಇತರರು ಇದ್ದರು.