ವಿದ್ಯಾರ್ಥಿಗಳು ಅಧ್ಯಯನಶೀಲರಾಗಲಿ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಧ್ಯಯನಶೀಲರಾಗುವ ಮೂಲಕ ಅಸಭ್ಯ ವಿಚಾರಗಳು, ನಕಾರಾತ್ಮಕ ಭಾವನೆಗಳು ಮನಸ್ಸಿನಲ್ಲಿ ಪ್ರವೇಶವಾಗದಂತೆ ಜಾಗೃತಿ ವಹಿಸಬೇಕು ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಹೆಬಸೂರಿನ ಸೆಂಕಡರಿ ಸ್ಕೂಲನಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ ವಿಷಯ ಕುರಿತು ಉಪನ್ಯಾಸ ನೀಡಿದರು.

ಅಧ್ಯಯನ ನಿರತರಾದಾಗ ವಿನಾಕಾರಣ ಹಾಳು ಹರಟೆ ಸಲ್ಲದು. ಅದು ನಿಮ್ಮ ಮನಸ್ಸಿನ ಶಕ್ತಿ ಕುಗ್ಗಿಸುತ್ತದೆ. ಸಾಮೂಹಿಕ ಅಧ್ಯಯನ, ಚರ್ಚೆ, ಪುನರಾವರ್ತನೆ, ವಿಚಾರ ವಿನಿಮಯದ ಮೂಲಕ ವಿಷಯ ಗ್ರಹಿಕೆ ಮಾಡಿಕೊಳ್ಳಬೇಕು. ಓದಿದ ವಿಷಯವನ್ನು ಸಾರಾಂಶ ರೂಪದಲ್ಲಿ ಬರೆಯಬೇಕು. ಪುನಃ, ಪುನಃ ನಿತ್ಯ ಓದುವ, ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಭಯದಿಂದ ಏಕಾಗ್ರತೆ ಹೊಂದಲು ಅಸಾಧ್ಯ ಎಂದರು.

ವೀರಣ್ಣ ಒಡ್ಡೀನ ಮಾತನಾಡಿ, ಹೆಚ್ಚು ಅಂಕ ಗಳಿಸಲು ಸಂಘದ ಶಿಕ್ಷಣ ಮಂಟಪವು 3 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಬಸೂರ ವಿದ್ಯಾ ಪ್ರಸಾರ ಸಮಿತಿ ಕಾರ್ಯಾಧ್ಯಕ್ಷ ಎಸ್​.ಎಸ್​. ಬಣವಿ ಮಾತನಾಡಿ, ಇದೊಂದು ಗ್ರಾಮೀಣ ಮಕ್ಕಳಿಗೆ ವಿನೂತನ ಕಾರ್ಯಕ್ರಮ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿ ಶಾಲೆಗೆ, ಪಾಲಕರಿಗೆ, ಗುರುಗಳಿಗೆ, ಕೀರ್ತಿ ತರಬೇಕು ಎಂದರು.

ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ಆರ್​. ಎಚ್​. ಮಾಡಳ್ಳಿ ಮಾತನಾಡಿದರು. ಬಿ.ಎಸ್​. ಕೊಣ್ಣೂರ, ಸಿ.ಬಿ. ಗೌಡರ, ಆರ್​.ಜಿ. ಮರಚರಡ್ಡಿ, ಎ.ಎಚ್​. ಪಾಟೀಲ, ಎಸ್​.ಎಸ್​. ನರಳೇಕರ, ಕವಿತಾ ಹೆಬ್ಬಾಳ, ವತ್ಸಲಾ ನೀರಲಗಿ, ಅಂಕಿತಾ ಮಳಲಿ, ಇತರರು ಇದ್ದರು.

ಪ್ರಭು ಶಿವಪುರ ಸ್ವಾಗತಿಸಿದರು. ಎಂ.ಎಂ. ಹೊಸಭಾವಿ ನಿರೂಪಿಸಿದರು. ಆರ್​.ಬಿ. ಕೊಣ್ಣೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net