

ಹೊಳೆನರಸೀಪುರ : ಶಿಸ್ತುಬದ್ಧ ಆಸಕ್ತಿ ಮತ್ತು ಪರಿಶ್ರಮದಿಂದ ಅಧ್ಯಯನ ನಡೆಸಿದಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.
ಪಟ್ಟಣದ ಸೋಶಿಯಲ್ ಕ್ಲಬ್‌ನ ಸ್ನೇಹ ಸದನ ಸಭಾಂಗಣದಲ್ಲಿ ಶನಿವಾರ ಸೋಶಿಯಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ 2025ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಣಾಮಕಾರಿ ಸಂವಹನ ಮಾಧ್ಯಮವಾದ ಮೊಬೈಲ್ ಬಳಕೆಯನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಅತಿಯಾದರೇ ಆರೋಗ್ಯ, ಸಮಯ ಮತ್ತು ಭವಿಷ್ಯ ಹಾಳಾಗುತ್ತದೆ. ಪದವಿ ನಂತರ ಐ.ಎ.ಎಸ್. ಕೆ.ಎ.ಎಸ್. ಮೆಡಿಕಲ್, ಇಂಜಿನಿಯರಿಂಗ್, ಸೇರಿದಂತೆ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬಹುದು ಎಂದು ನುಡಿದರು.
ನಿರ್ದಿಷ್ಟ ಗುರಿ ಮತ್ತು ಯೋಜನಾಬದ್ಧ ವ್ಯಾಸಂಗದಿಂದ ನಿಮ್ಮ ಗುರಿಯನ್ನು ತಲುಪಬಹುದು. ಪಾಲಕರಿಗೆ ಮತ್ತು ಶಿಕ್ಷಣ ಸಂಸ್ಥೆಗೆ ಹೆಸರು ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಪ್ರತಿಭಾ ಪುರಸ್ಕಾರಗಳನ್ನು ನೀಡುವ ಮೂಲಕ ಸಮಾಜ ಮುಖಿ ಸೇವೆ ಮಾಡುತ್ತಿರುವ ಸೋಶಿಯಲ್ ಕ್ಲಬ್ ನ ಆಶಯ ಮತ್ತು ಸಂಕಲ್ಪವನ್ನು ಶ್ಲಾಘಿಸಿದರು.
ಸಮಾರಂಭವನ್ನು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಉದ್ಘಾಟಿಸಿದರು. ಸೋಶಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ. ಹೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಉಪನ್ಯಾಸಕ ಎ.ಎಸ್.ಗಿರೀಶ್ ಮಾತನಾಡಿದರು.
2024-2025 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕ್ಲಬ್ ಕಾರ್ಯದರ್ಶಿ ಕೆ.ಆರ್.ಸುದರ್ಶನ ಕುಮಾರ್, ಉಪನ್ಯಾಸಕ ಡಾ.ಕೃಷ್ಣಮೂರ್ತಿ, ಸೋಶಿಯಲ್ ಕ್ಲಬ್ ನ ಪದಾಧಿಕಾರಿಗಳು ಸದಸ್ಯರು, ವಿದ್ಯಾರ್ಥಿಗಳು, ಪಾಲಕರು ಮತ್ತು ಇನ್ನಿತರರು ಇದ್ದರು.