ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಇರಲಿ

26kkr1(12-24 raste suraksathe revati
ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ರಸ್ತೆ ಸುರಕ್ಷತೆ ಸಪ್ತಾಹ, ಅಪರಾಧ ತಡೆಯುವಿಕೆ, ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. ಇನ್‌ಸ್ಪೆಕ್ಟರ್ ರೇವತಿ, ಕುಮಾರ್, ಶಿಕ್ಷಕ, ವಿದ್ಯಾರ್ಥಿ ಸಮೂಹದವರು ಇದ್ದರು.
Published on

ಕಿಕ್ಕೇರಿ : ಅಪರಾಧ ತಡೆಯುವಿಕೆಯಲ್ಲಿ ಕಾನೂನು ಅರಿವು ಪ್ರಮುಖ ಪಾತ್ರವಹಿಸಲಿದೆ ಎಂದು ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.

ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆರಕ್ಷಕ ಠಾಣೆ ಆಯೋಜಿಸಿದ್ದ ರಸ್ತೆ ಸುರಕ್ಷತೆ ಸಪ್ತಾಹ, ಅಪರಾಧ ತಡೆಯುವಿಕೆ, ಸೈಬರ್ ಕ್ರೈಂ ಮಾಹಿತಿ ಕುರಿತು ಮಾತನಾಡಿದರು. ಮಕ್ಕಳಲ್ಲಿ ಕಾನೂನು ಅರಿವು ಇರಬೇಕು. ಆಗ ಮಕ್ಕಳೇ ಪಾಲಕರಿಗೆ ಮಾಹಿತಿ ನೀಡುತ್ತಾರೆ. ಪ್ರತಿ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕು ಸಂವಿಧಾನಾತ್ಮಕವಾಗಿದೆ. ಅಂಬೇಡ್ಕರ್ ನೀಡಿರುವ ಸಂವಿಧಾನ ಅಡಿಯಲ್ಲಿ ಎಲ್ಲರೂ ಬದುಕಬೇಕಿದೆ ಎಂದರು.

ಕಾನೂನು ಗೌರವಿಸುವ ಪ್ರತಿಯೊಬ್ಬರಿಗೂ ರಕ್ಷಣೆ, ನೆಮ್ಮದಿ ಬದುಕು ಸಾಧ್ಯ. ಯುವಕರು ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಸೈಬರ್ ಕ್ರೈಂ ಅವ್ಯಾಹತವಾಗಿ ನಡೆಯುತ್ತಿದೆ. ಅಪರಿಚಿತರಿಗೆ ಬ್ಯಾಂಕ್ ಮತ್ತಿತರ ಯಾವುದೇ ಮಾಹಿತಿ ನೀಡದಿರಿ. ಸರಗಳ್ಳತನ ತಡೆಯಲು ಮಹಿಳೆಯರು ಆಭರಣಗಳನ್ನು ತೋರಿಸುವಂತೆ ಹಾಕಿಕೊಳ್ಳದಿರಿ. ಒಂಟಿಯಾಗಿ ಓಡಾಡದಿರಿ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡಬಾರದು. ತಪ್ಪಿದಲ್ಲಿ ಪಾಲಕರು ಹಾಗೂ ಅಪ್ರಾಪ್ತ ಚಾಲಕ ಇಬ್ಬರಿಗೂ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ಗಾಂಜಾ, ತಂಬಾಕು, ಅಫೀಮು ಮಾರಾಟ ಮಾಡುವವರ ಮಾಹಿತಿ ನೀಡಬೇಕು ಎಂದ ಅವರು, ಹೆಣ್ಣು ಮಕ್ಕಳು, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಜಾಗೃತಿ ವಹಿಸಬೇಕು. ಅಪರಿಚಿತ ವ್ಯಕ್ತಿಗಳು ಕಂಡರೆ ಮಾಹಿತಿ ನೀಡಬೇಕು. ತಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಪೊಲೀಸ್ ಇಲಾಖೆಗೆ ಬನ್ನಿ ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ಕುಮಾರ್, ಮೂರ್ತಿ, ಶಾಲಾ ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net