ಮಠದಲ್ಲೇ ಕ್ವಾರಂಟೈನ್ ; ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಲು ಇಚ್ಛಿಸದ ಮಕ್ಕಳು

15Tmk_Mutt_Qurataine_01
Published on

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ತೆರಳಿದ್ದ ಸಿದ್ಧಗಂಗಾಮಠದ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮಠಕ್ಕೆ ಹಿಂದಿರುಗುತ್ತಿದ್ದು, ಎಲ್ಲರನ್ನೂ ಮಠದಲ್ಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಹೊರಜಿಲ್ಲೆಗಳಿಂದ ಈವರೆಗೆ 400ಕ್ಕೂ ಹೆಚ್ಚು ಮಕ್ಕಳು ಮಠಕ್ಕೆ ಹಿಂದಿರುಗಿದ್ದು, ಎಲ್ಲರನ್ನೂ ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಜೂ.25ರಂದು ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶ್ರೀಮಠದಲ್ಲಿ ಆಶ್ರಯ ಪಡೆದಿರುವ 1235 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಗೂ ಮುನ್ನ ಮಠದಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ಅವರವರ ಗ್ರಾಮಗಳಿಗೆ ತೆರಳಿದ್ದರು. ತಾವಿರುವ ಊರುಗಳಲ್ಲಿಯೇ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ನೀಡಿದ್ದರೂ ಯಾರೊಬ್ಬರೂ ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಲು ಇಚ್ಛಿಸಿಲ್ಲ. ಈ ಬಗ್ಗೆ ಪ್ರತಿ ವಿದ್ಯಾರ್ಥಿಗಳನ್ನು ಮಠದ ಶಿಕ್ಷಕರು ದೂರವಾಣಿ ಮೂಲಕ ಸಂಪರ್ಕಿಸಿದ್ದರು.

400 ಮಕ್ಕಳು ಕ್ವಾರಂಟೈನ್: ಪರೀಕ್ಷೆಗೂ 10 ದಿನ ಮುನ್ನವೇ ವಿದ್ಯಾರ್ಥಿಗಳನ್ನು ಮಠಕ್ಕೆ ಮರಳುವಂತೆ ಶಿಕ್ಷಕರು ದೂರವಾಣಿಯಲ್ಲಿ ಸೂಚನೆ ನೀಡಿದ್ದು, ಜೂ.10ರಿಂದಲೇ ಮಠಕ್ಕೆ ಮಕ್ಕಳು ಆಗಮಿಸುತ್ತಿದ್ದು, ಈವರೆಗೆ 400 ಮಕ್ಕಳು ವಾಪಸಾಗಿದ್ದಾರೆ. ಶ್ರೀಮಠದ ಪ್ರವೇಶದ್ವಾರದಲ್ಲೇ ಹೊರಜಿಲ್ಲೆಯಿಂದ ಬರುವ ಮಕ್ಕಳ ಆರೋಗ್ಯ ತಪಾಸಣೆಗೊಳಪಡಿಸಿ ಅವರಿಗೆ ಪ್ರತ್ಯೇಕ ಕಟ್ಟಡದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಗಂಗಾವತಿ ಸೇರಿ ಉತ್ತರ ಕರ್ನಾಟಕ ಭಾಗದಿಂದ ಬಹುತೇಕ ವಿದ್ಯಾರ್ಥಿಗಳು ಮಠಕ್ಕೆ ಬರುತ್ತಿದ್ದು, ಕರೊನಾ ಆತಂಕ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಎಲ್ಲಿಯೂ ಹೊರಗಡೆ ಓಡಾಡದಂತೆ ಡಾ.ಶ್ರೀ ಶಿವಕುಮಾರ

ಸ್ವಾಮೀಜಿ ಶತಮಾನೋತ್ಸವ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಠದ ಸಿಬ್ಬಂದಿಯೇ ಈ ಮಕ್ಕಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸಿದ್ಧಗಂಗಾಮಠವಾಯ್ತು ಕ್ಲಸ್ಟರ್ : ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸಿದ್ಧಗಂಗಾಮಠವನ್ನು ಕ್ಲಸ್ಟರ್ ಆಗಿ ಗುರುತಿಸಿದ್ದು, ಒಟ್ಟು 19 ಶಾಲೆಗಳ ಮಕ್ಕಳು ಮಠದ ಆವರಣದಲ್ಲಿನ 4, ಕ್ಯಾತಸಂದ್ರ ಒಂದು ಕೇಂದ್ರ ಸೇರಿ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2182 ವಿದ್ಯಾರ್ಥಿಗಳು ಈ ಐದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ಮಠದಲ್ಲಿನ 103 ಹಾಗೂ ಕ್ಯಾತಸಂದ್ರದಲ್ಲಿ 17 ಕೊಠಡಿಗಳು ಒಟ್ಟು 120 ಕೊಠಡಿಗಳನ್ನು ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತೀ ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಇರಲಿದೆ. ಹರಳೂರು, ನೇರಳಾಪುರ, ಹಿರೇಹಳ್ಳಿ, ಮೈದಾಳ, ದೇವರಾಯಪಟ್ಟಣ, ಸತ್ಯಮಂಗಲ ಸೇರಿದಂತೆ ಒಟ್ಟು 19 ಶಾಲೆಗಳ ಮಕ್ಕಳು ಮಠದಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಮಕ್ಕಳ ರೂಂಗೆ ತಿಂಡಿ, ಊಟ: ಪ್ರತ್ಯೇಕ ಕ್ವಾರಂಟೈನ್‌ನಲ್ಲಿರುವ ಮಕ್ಕಳ ರೂಂಗಳಲ್ಲೇ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಚಪಾತಿ, ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಈ ಮಕ್ಕಳಿಗೆ ಹಾಲನ್ನೂ ಕೊಡಲಾಗುವುದು. ಜತೆಗೆ ಪ್ರತಿನಿತ್ಯ ಈ ಮಕ್ಕಳ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ನಿಗಾವಹಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ನಿಷೇಧಾಜ್ಞೆ ಜಾರಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂ.18ರಂದು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಜೂ.18ರ ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು. ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ನಕಲಿ ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಲು ಅವಕಾಶವಿರುವುದರಿಂದ ಪರೀಕ್ಷೆಯ ಮುಖ್ಯ ಅಧೀಕ್ಷಕರಿಗೆ ಕ್ಯಾಮರಾ ಹೊಂದಿರುವ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡ್ಡಾಯವಾಗಿ ನಿಷೇಧಿಸಿದೆ. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಎಂದು ಕಂಡುಬಂದಲ್ಲಿ ದಂಡಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 107 ಮತ್ತು 110ರ ಅಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಶ್ರೀಮಠದಲ್ಲಿ 2 ಪ್ರೌಢಶಾಲೆಗಳಿದ್ದು, 1235 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೂ 10 ದಿನ ಮುಂಚಿತವಾಗೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಠಕ್ಕೆ ಬರುವಂತೆ ಸೂಚಿಸಲಾಗಿತ್ತು. 3-4 ದಿನಗಳಿಂದ 20-30 ವಿದ್ಯಾರ್ಥಿಗಳಂತೆ ಈವರೆಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದು ಪ್ರಾಥಮಿಕ ಆರೋಗ್ಯ ತಪಾಸಣೆ ಬಳಿಕ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕೆ.ಎಂ.ವಿಜಯಕುಮಾರ್ ಮುಖ್ಯಶಿಕ್ಷಕರು, ಎಸ್‌ಎಸ್ ಆರ್‌ಎಚ್‌ಎಸ್ ಮಠದ ಮಕ್ಕಳನ್ನು ಕ್ವಾರಂಟೈನ್‌ನಲ್ಲಿರಿಸುವ ಮುನ್ನ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ಪರೀಕ್ಷಾ ದಿನದಂದು ಐದು ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಬಳಿಕ ಸ್ಯಾನಿಟೈಸರ್ ಜತೆಗೆ ಮಾಸ್ಕ್ ನೀಡಲಾಗುವುದು. ಪ್ರತೀ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುವುದು. ಆರ್.ಕಾಮಾಕ್ಷಮ್ಮ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net