

ಇಳಕಲ್ಲ(ಗ್ರಾ): ತಾಲೂಕಿನ ನಂದವಾಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿನ ಬಿಸಿಯೂಟದಲ್ಲಿ ಬಾಲ ಹುಳುಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಊಟ ಚೆಲ್ಲಿ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನದ ಬಿಸಿ ಊಟ ನೀಡಿದ ಸಂದರ್ಭದಲ್ಲಿ ಆಹಾರದಲ್ಲಿ ಹುಳುಗಳು ಕಾಣಿಸಿದವು. ಕೆಲವು ವಿದ್ಯಾರ್ಥಿಗಳು ತಿಳಿಯದೆ ಊಟ ಮಾಡಿದರೂ ತೊಂದರೆಯಾಗಿಲ್ಲ. ಆದರೆ, ಬಹಳಷ್ಟು ವಿದ್ಯಾರ್ಥಿಗಳು ಊಟ ಮಾಡದೆ ಅದನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಪ್ರಭಾರಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಧಾವಿಸಿ ವಿಚಾರಣೆ ನಡೆಸಿದರಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಅಲ್ಲದೆ, ಮುಖ್ಯಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಅಕ್ಷರ ದಾಸೋಹ ಅಧಿಕಾರಿ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದು, ಅವರು ಬಂದ ನಂತರ ವಿಚಾರಣೆ ಮಾಡಲು ತಿಳಿಸಲಾಗುವುದು. ವೆಂಕಟೇಶ ಕೊಂಕಲ್, ಬಿಇಒ