

ನಾಲತವಾಡ: ಕಳೆದ 30 ವರ್ಷಗಳಿಂದಲೂ ಅಲ್ಲದೆ ಇತ್ತೀಚೆಗೆ ಜಾರಿಗೊಳಿಸಿದ ಶಕ್ತಿ ಯೋಜನೆ ಪರಿಣಾಮ ಸಕಾಲಕ್ಕೆ ಶಾಲೆಗೆ ತೆರಳಲು ಆಗಮಿಸುವ ಬಸ್‌ಗಳು ನಿಲ್ಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಮೀಪದ ವೀರೇಶ ನಗರದಲ್ಲಿ ವಿದ್ಯಾರ್ಥಿಗಳು ವಾಹನಗಳನ್ನು ತಡೆದು ಗುರುವಾರ ಪ್ರತಿಭಟಿಸಿದರು.
ನಾಲತವಾಡ ಪಟ್ಟಣಕ್ಕೆ ನಿತ್ಯ ಆರೇಶಂಕರ, ನಾಗಬೇನಾಳ, ಸಿದ್ದಾಪುರ ಡ್ಯಾಮ್, ವೀರೇಶ ನಗರ ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಬಸ್‌ಗಳು ಇಲ್ಲದ್ದರಿಂದ ಶಾಲೆಯ ಸಮಯಕ್ಕೆ ತಲುಪುವುದು ಕಷ್ಟವಾಗಿದೆ. ವಿದ್ಯಾರ್ಥಿಗಳು ನಮ್ಮ ಸಂಕಷ್ಟ ಯಾರಿಗೇ ಹೇಳೋಣ ಎಂದು ತಮ್ಮ ಅಳಲನ್ನು ಪ್ರತಿಭಟನೆ ವೇಳೆ ತೋಡಿಕೊಂಡರು.
ಲಿಂಗಸುಗೂರು ಸೇರಿದಂತೆ ಇತರ ಘಟಕಗಳ ಬಸ್‌ಗಳೇ ನಮಗೆ ಆಸರೆಯಾಗಿವೆ. ಆದರೆ ಸ್ವಯಂ ಘಟಕ ಮುದ್ದೇಬಿಹಾಳ ಮೂಲಕ ಬಸ್‌ಗಳ ಸೌಕರ್ಯ ಕಲ್ಪಿಸುತ್ತಿಲ್ಲ. ಬರಿ ಪ್ರತಿಭಟನೆ ಮಾಡುವುದೇ ಆಗಿದೆ. ಗಡಿ ರಾಜ್ಯದ ಸಂಪರ್ಕ ಹೊಂದಿದ ನಮ್ಮ ಗ್ರಾಮಕ್ಕೆ ಬಸ್‌ಗಳು ಓಡುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು, ಪೋಷಕರು.
ಹಿಂದಿಗಿಂತಲೂ ಸಾರಿಗೆ ಬಸ್‌ಗಳ ಸಮಸ್ಯೆ ತಪ್ಪಿಲ್ಲ, ಶಕ್ತಿ ಯೋಜನೆಯಿಂದ ಬಸ್‌ಗಳು ಪ್ರಯಾಣಿಕರನ್ನು ತುಂಬಿಕೊಂಡೇ ಬರುತ್ತಿವೆ. ಹೀಗಾಗಿ ಚಾಲಕರು ಬಸ್‌ಗಳನ್ನು ನಿಲ್ಲಿಸದೆ ವೇಗವಾಗಿ ತೆರಳುತ್ತಾರೆ. ನಮ್ಮ ಗತಿ ಏನು ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.
ಪ್ರೌಢಶಾಲೆ ಬೇಕಿದೆ: ನಾಲತವಾಡ ಪಟ್ಟಣದ ಪ್ರೌಢಶಾಲೆ ಹಾಗೂ ಕಾಲೇಜಿಗೆ ನಿತ್ಯ ಹೋಗುವ ತಾಪತ್ರಯ ತಪ್ಪಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಸ್ಥಳಕ್ಕೆ ಹೋಗಿ ಕಲಿಯಬೇಕಿದೆ. ವೀರೇಶ ನಗರದಲ್ಲಿ ಶೀಘ್ರ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭಿಸಿ ನಿತ್ಯ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳ ಸಂಕಷ್ಟ ತಪ್ಪಿಸಬೇಕು ಎನ್ನುತ್ತಾರೆ ಸ್ಥಳೀಯ ಶಿವಾನಂದ ಗೌಂಡಿ, ಸಂಗಯ್ಯ ಡಂಬಳ, ಸಂಗಪ್ಪ ಉಂಡಿ, ಬಸವರಾಜ ಕೋಟೆಗುಡ್ಡ, ಚನ್ನಪ್ಪ ಗುರಿಕಾರ, ಚನ್ನಪ್ಪ ಕೋಳೂರ, ಭೀಮಣ್ಣ ಗುರಿಕಾರ, ಬಸಪ್ಪ ಹವಾಲ್ದಾರ, ಅಮರಪ್ಪ ಕರಿಬಾವಿ.