

ಮೈಸೂರು: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮೈವಿವಿ ಮಾನಸಗಂಗೋತ್ರಿಯ ಎದುರಿನ ಕುವೆಂಪು ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯುಜಿಸಿ-ನೆಟ್ ಪರೀಕ್ಷೆಯನ್ನು ಜೂ.18ರಂದು ನಡೆಸಲಾಗಿದೆ. ಆದರೆ, ಶಿಕ್ಷಣ ಸಚಿವಾಲಯ ಯುಜಿಸಿ-ನೆಟ್ 2024 ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕಾರಣಕ್ಕೆ ಜೂ.19ರಂದು ಪರೀಕ್ಷೆ ರದ್ದುಗೊಳಿಸಿದೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ಪ್ರಾರಂಭವಾದಾಗಿನಿಂದ ಪ್ರಮುಖ ಪರೀಕ್ಷೆಗಳಲ್ಲಿ ಗಂಭೀರ ಅವ್ಯವಹಾರಗಳು ನಡೆಯುತ್ತಿದೆ. ಅಂತಹ ಎನ್‌ಟಿಎ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷ್ಷಪಾತ ತನಿಖೆಗೆ ಈ ಪ್ರಕರಣವನ್ನು ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸಮಿತಿಯನ್ನು ರಚನೆ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಜೂ.4ರಂದು ಬಿಡುಗಡೆಯಾದ ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಒಂದೇ ಕೇಂದ್ರದ ಸತತ ರೋಲ್ ಸಂಖ್ಯೆ ಹೊಂದಿರುವ ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಆ ವಿದ್ಯಾರ್ಥಿಗಳು ಒಂದೇ ಖಾಸಗಿ ಕೋಚಿಂಗ್ ಸೆಂಟರ್ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಹಲವಾರು ಪರೀಕ್ಷೆಗಳಲ್ಲಿ ಅಕ್ರಮವಾಗಿರುವ ಹಿನ್ನೆಲೆಯಲ್ಲಿ ಎನ್‌ಟಿಎ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ರದ್ದುಗೊಳಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಾರಿಯಾಗಬೇಕು. ಎಲ್ಲ ರಾಷ್ಟ್ರೀಯ ಪರೀಕ್ಷೆಗಳನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ತಿಳಿಸಿರುವ 22 ಭಾಷೆಗಳಲ್ಲೂ ನಡೆಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆ ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದರು.
ಎಸ್‌ಎಫ್‌ಐನ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್, ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ.ಅಭಿ, ಮುಖಂಡರಾದ ಎಸ್.ಕೆ.ಚಿರಾಗ್, ಪ್ರಜ್ವಲ್, ಮೇಘಶ್ರೀ, ಭಾರತ್ ಇನ್ನಿತರರಿದ್ದರು.