

ಮೈಸೂರು: ನೀಟ್ ಪ್ರವೇಶ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಹಾಗೂ ಪರೀಕ್ಷಾ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇತ್ತೀಚೆಗೆ ಪ್ರಕಟಗೊಂಡ ನೀಟ್ ಪರೀಕ್ಷಾ ಫಲಿತಾಂಶದ ಪಾರದರ್ಶಕತೆಯ ಕುರಿತು ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕ ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ, ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಿಕೆಯಾಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಾಗಿ ಎನ್‌ಟಿಎ ಸಮಜಾಯಿಷಿ ನೀಡಿದೆ. ಆದರೆ, ಹೆಚ್ಚುವರಿ ಶುಲ್ಕಗಳನ್ನು ನೀಡಿರುವ ಮಾನದಂಡವು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಈ ವರ್ಷ ಪ್ರಕಟಿಸಲಾಗಿದ್ದ ಮಾರ್ಗಸೂಚಿ ಅನ್ವಯ ಹೆಚ್ಚುವರಿ ಅಂಕ ನೀಡಲು ಅವಕಾಶವಿಲ್ಲ. ಆಶ್ಚರ್ಯಕರವೆಂಬಂತೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ ಅಂಕ ಗಳಿಸಿದ್ದಾರೆ. ಇದರೊಂದಿಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಅಥವಾ ಈ ಕುರಿತು ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂಬ ಆರೋಪವಿದೆ. ಕೆಟ್ಟ ಫಲಿತಾಂಶದಿಂದಾಗಿ ಈಗಾಗಲೇ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಟ್ಟಾರೆಯಾಗಿ, ನೀಟ್ ಪರೀಕ್ಷಾ ಫಲಿತಾಂಶದಲ್ಲಿನ ಪಾರದರ್ಶಕತೆ ಕೊರತೆ ಮತ್ತು ಭ್ರಷ್ಟಾಚಾರದ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿರುವುದು ಖಂಡನೀಯ ಎಂದರು.
ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದರೂ ಈ ಬಗ್ಗೆ ಸೂಕ್ತ ತನಿಖೆ ನಡೆಸದೆ ಇರುವುದು ಖಂಡನೀಯ. ಈ ಮುಂಚೆ, ರಾಜ್ಯಮಟ್ಟದಲ್ಲಿ ಜಂಟಿ ಪ್ರವೇಶ ಪರೀಕ್ಷೆಗಳು ಜಾರಿಯಲ್ಲಿದ್ದಾಗ, ಭ್ರಷ್ಟಾಚಾರದ ಕಾರಣವೊಡ್ಡಿ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆ ಪ್ರಾರಂಭಿಸಲಾಗಿತ್ತು. ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಬದಲಿಗೆ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಪರಿಹಾರವಲ್ಲ ಎಂದರು.
ಸರ್ಕಾರದ ನಿಷ್ಕಾಳಜಿ ಮತ್ತು ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವ್ಯಾಪಾರೀಕರಣದಿಂದಾಗಿ, ಇಡೀ ವೈದ್ಯಕೀಯ ಪ್ರವೇಶ ಪರೀಕ್ಷೆಯು ಕುಸಿತಕ್ಕೊಳಗಾಗುತ್ತಿದೆ. ಅಮಾಯಕ ವಿದ್ಯಾರ್ಥಿಗಳು ಇದರ ಬಲಿಪಶುಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಇದರಲ್ಲಿ ಭಾಗಿಯಾದ ಎಲ್ಲ ವ್ಯಕ್ತಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ನಿತಿನ್, ಸ್ವಾತಿ, ಚಂದ್ರಿಕಾ, ಹೇಮಾ, ಅಂಜಲಿ ತೇಜು ಸೇರಿದಂತೆ ನೂರಾರು ಪಿಯು ವಿದ್ಯಾರ್ಥಿಗಳು ಭಾಗವಹಿಸಿದ್ದರು.