ಘಟಿಕೋತ್ಸವದಂದೇ ರಾಸಿಯು ಲೋಪದೋಷ ಖಂಡಿಸಿ ವಿದ್ಯಾರ್ಥಿಗಳ ಧರಣಿ

IMG20230320151841.jpg
Published on

ಬೆಳಗಾವಿ: ನಗರದ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿರುವುವಾಗಲೇ ವಿವಿಯ ಲೋಪದೋಷಗಳನ್ನು ಖಂಡಿಸಿ ವಿದ್ಯಾರ್ಥಿಗಳು ಸುವರ್ಣಸೌಧ ಎದುರು ಧರಣಿ ಕುಳಿತ ಘಟನೆ ನಡೆಯಿತು.


ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಷಯಗಳ ಪಠ್ಯಕ್ರಮ ಪೂರ್ಣಗೊಳಿಸಿಲ್ಲ. ಈಗ ಏಕಾಏಕಿ ಸ್ನಾತಕೋತ್ತರ ಪದವಿ 3ನೇ ಸೆಮಿಸ್ಟರ್ ಪರೀಕೆ ಆಯೋಜಿಸಿದ್ದಾರೆ. ವಿವಿ ಕ್ರಮ ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವು ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿವಿಯ 200 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ 3-4 ತಿಂಗಳಿಂದ ಊಟ ಬಂದ್ ಆಗಿದೆ, ನೀರು ಸೇರಿ ಮೂಲ ಸೌಲಭ್ಯಗಳು ಇಲ್ಲ. ವಿವಿ ಕ್ಯಾಂಪಸ್‌ನಲ್ಲಿರುವ ಕ್ಯಾಂಟಿನಲ್ಲಿ ದುಡ್ಡು ಕೊಟ್ಟು ಊಟ ಮಾಡುತ್ತಿದ್ದೆವು. 3 ದಿನಗಳಿಂದ ಕ್ಯಾಂಟೀನ್ ಕೂಡ ಬಂದ್ ಆಗಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ ಮೇಲೆ ಗಂಭೀರ ಪರಿಣಾ ಬೀರುತ್ತಿದೆ. ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ವಿದ್ಯಾರ್ಥಿಗಳು ಔಷಧಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಅಳಲು ತೋಡಿಕೊಂಡರು.
ಘಟಿಕೋತ್ಸವ ಮುಗಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳತ್ತ ಬರದೇ ಹೊರಟಿದ್ದ ಕುಲಪತಿ, ಕುಲಸಚಿವರ ಕಾರುಗಳಿಗೆ ವಿದ್ಯಾರ್ಥಿಗಳು ಗೇರಾವ್ ಹಾಕಿದ ಘಟನೆಯೂ ನಡೆಯಿತು. ಮಾ.26ರಿಂದ ನಿಗದಿಪಡಿಸಿರುವ ವಿವಿಧ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಬೇಕು. ಹಾಸ್ಟೆಲ್‌ಗಳಲ್ಲಿ ಮೆಸ್ ಆರಂಭಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳಿಗೆ ಸರಿಯಾಗಿ ಪ್ರತಿಕ್ರಿಯಸದ ಕುಲಪತಿ ಅವರು ನಾನು ಮಾತನಾಡಿ ತಿಳಿಸುತ್ತೇನೆ ಎಂದು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net